×
Ad

ಕೊರೋನ ವೈರಸ್‍ಗೂ ಕೋಳಿಗೂ ಸಂಬಂಧವಿಲ್ಲ: ಲೈಫ್‍ಲೈನ್ ಫೀಡ್ಸ್ ವ್ಯವಸ್ಥಾಪಕ ನಿರ್ದೇಶಕ ಕಿಶೋರ್

Update: 2020-03-12 19:35 IST

ಚಿಕ್ಕಮಗಳೂರು, ಅ.12: ಕೊರೋನ ವೈರಸ್‍ಗೂ ಕೋಳಿಗೂ ಯಾವುದೇ ಸಂಬಂಧವೇ ಇಲ್ಲ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ಅಪಪ್ರಚಾರ ಮಾಡುತ್ತಿರುವ ಪರಿಣಾಮ ಕುಕ್ಕಟೋದ್ಯಮ ಭಾರೀ ನಷ್ಟ ಅನುಭವಿಸುತ್ತಿದೆ. ಕೋಳಿಗಳಿಂದ ಕೊರೋನ ವೈರಸ್ ಹರಡುತ್ತದೆ ಎಂಬುದು ಅಪ್ಪಟ ಸುಳ್ಳು ವದಂತಿ. ಕೊರೋನಾ ವೈರಸ್ ಕೋಳಿಯಿಂದ ಹರಡಿರುವ ಬಗ್ಗೆ ಯಾವುದೇ ದಾಖಲೆಗಳೂ ಇಲ್ಲ ಎಂದು ಜಿಲ್ಲೆಯ ಹೆಸರಾಂತ ಉದ್ಯಮಿ ಹಾಗೂ ಲೈಫ್‍ಲೈನ್ ಫೀಡ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಕೆ.ಕಿಶೋರ್ ಕುಮಾರ್ ಹೇಳಿದ್ದಾರೆ.

ಗುರುವಾರ ನಗರದಲ್ಲಿ ಕರೆಯಲಾಗಿದ್ದ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನ ವೈರಸ್ ಕೋಳಿಗಳಿಂದ ಹರಡುತ್ತದೆ ಎನ್ನುವ ಬಗ್ಗೆ ದೇಶ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದಿರುವ ಯಾವುದೇ ಸಂಶೋಧನೆಗಳು ದೃಢಪಡಿಸಿಲ್ಲ, ಕುಕ್ಕುಟೋದ್ಯಮಕ್ಕೆ ಹಿನ್ನಡೆ ಉಂಟು ಮಾಡಬೇಕೆಂಬ ದುರುದ್ದೇಶದಿಂದ ಸುಳ್ಳು ಸುದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಹರಡಿಸಿದ್ದಾರೆ. ಈ ಅಪಪ್ರಚಾರದಿಂದಾಗಿ ದೇಶದ್ಯಾಂತ ಕುಕ್ಕುಟೋದ್ಯಮ ಮತ್ತು ಉದ್ಯಮ ಅವಲಂಭಿಸಿರುವ ಕೋಟ್ಯಂತರ ರೈತರು ಮತ್ತು ಜನರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಕಿಶೋರ್ ಕುಮಾರ್ ಬೇಸರ ವ್ಯಕ್ತಪಡಿಸಿದರು. . 

ದೇಶದಲ್ಲಿ 10 ಕೋಟಿ ರೈತರು ಕುಕ್ಕುಟ ಉದ್ಯಮವನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅವಲಂಭಿಸಿದ್ದಾರೆ. ದೇಶದಲ್ಲಿ ವಾರ್ಷಿಕ 220 ಲಕ್ಷ ಟನ್ ಜೋಳವನ್ನು ಬೆಳೆಯಲಾಗುತ್ತಿದೆ. ಅದರಲ್ಲಿ 180 ಲಕ್ಷ ಟನ್ ಜೋಳ ಕುಕ್ಕುಟೋದ್ಯಮಕ್ಕೆ ಬಳಸಲಾಗುತ್ತಿದೆ. ಉಳಿದ 40 ಲಕ್ಷ ಟನ್ ಸ್ಟಾರ್ಚ್ ಮತ್ತು ಗ್ಲೂಕೋಸ್ ತಯಾರಿಕೆಗೆ ಬಳಸಲಾಗುತ್ತಿದೆ. ಕೋಳಿಯಿಂದ ಕೊರೋನ ವೈರಸ್ ಹರಡುತ್ತದೆ ಎಂಬ ವದಂತಿಗೂ ಮೊದಲು ಮಾರುಕಟ್ಟೆಯಲ್ಲಿ ಒಂದು ಟನ್ ಜೋಳಕ್ಕೆ 20 ಸಾವಿರ ರೂ. ಬೆಲೆ ಇತ್ತು. ಆದರೆ, ಸುಳ್ಳುಸುದ್ದಿ ಹಬ್ಬಿದ ನಂತರ ಒಂದು ಟನ್ ಜೋಳಕ್ಕೆ 6 ಸಾವಿರ ರೂ.ಗೆ ಧಾರಣೆ ಕುಸಿತ ಕಂಡಿದೆ. ದೇಶದಲ್ಲಿ ಸುಮಾರು 9 ಸಾವಿರ ಕೋಟಿ ರೂ. ಮೌಲ್ಯದ ಜೋಳದ ಬೆಳೆಯಿಂದ ರೈತರು ಭಾರೀ ನಷ್ಟ ಅನುಭವಿಸುವಂತಾಗಿದೆ ಎಂದು ಅವರು ತಿಳಿಸಿದರು.

ಸೋಯಾ ಅವರೆ ದೇಶದಲ್ಲಿ ವಾರ್ಷಿಕ 110 ಲಕ್ಷ ಟನ್ ಬೆಳೆಯಲಾಗುತ್ತಿದೆ. ಅದರಲ್ಲಿ ಕುಕ್ಕುಟೋದ್ಯಮಕ್ಕೆ 90 ಲಕ್ಷ ಟನ್ ಬಳಕೆ ಮಾಡಲಾಗುತ್ತಿದೆ. 20 ಲಕ್ಷ ಟನ್ ಸೋಯಾ ಅವರೆ ಅಡುಗೆ ಎಣ್ಣೆ ತಯಾರಿಕೆಗೆ ಬಳಕೆ ಮಾಡಲಾಗುತ್ತಿದೆ. ಹಿಂದೆ ಒಂದು ಟನ್ ಸೋಯಾ ಅವರೆಗೆ 42 ಸಾವಿರ ರೂ. ಬೆಲೆ ಇದದ್ದು ಈಗ 34 ಸಾವಿರ ರೂ.ಗೆ ಕುಸಿತ ಕಂಡಿದೆ. ರೈತರು ಒಂದು ಟನ್‍ಗೆ 8 ಸಾವಿರ ರೂ. ನಷ್ಟ  ಅನುಭವಿಸುತ್ತಿದ್ದಾರೆ ಎಂದು ಅವರು ವಿಷಾದಿಸಿದರು.

ಅಕ್ಕಿಯ ತೌಡು, ಕಡಲೆಕಾಯಿ ಹಿಂಡಿ, ಸಾಸಿವೆ ಹಿಂಡಿ, ಉಚ್ಚೆಳು ಹಿಂಡಿ ಕುಕ್ಕುಟೋದ್ಯಮದಲ್ಲಿ ಬಳಕೆ ಮಾಡಲಾಗುತ್ತಿದೆ. ಕುಕ್ಕುಟೋದ್ಯಮ ಈ ಕಚ್ಚಾ ಉತ್ಪನ್ನವನ್ನು ಬಳಕೆ ಮಾಡಿಕೊಳ್ಳದಿದ್ದರೆ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಬೆಲೆ ಏರಿಕೆ ಬಿಸಿ ಸಾಮಾನ್ಯಜನರು ಎದುರಿಸಬೇಕಾಗುತ್ತದೆ. ಜಿಲ್ಲೆಯಲ್ಲಿ ಕಳೆದ 15 ವರ್ಷಗಳ ಹಿಂದೆ ರೈತರು ಜೋಳ ಬೆಳೆಯುತ್ತಿರಲಿಲ್ಲ, ಲೈಫ್‍ಲೈನ್ ಸಂಸ್ಥೆ ನೀಡಿದ ಪ್ರೋತ್ಸಾಹದಿಂದ ಜಿಲ್ಲೆಯ ರೈತರು 60 ಸಾವಿರ ಟನ್ ಜೋಳ ಬೆಳೆಯುತ್ತಿದ್ದಾರೆ. ಈಲ್ಲೆಯ ಜನರು 10 ಸಾವಿರಕ್ಕೂ ಹೆಚ್ಚಿನ ಜನರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕುಕ್ಕುಟೋದ್ಯಮವನ್ನು ಅವಲಂಬಿಸಿದ್ದಾರೆ. ಇಂತಹ ಸುಳ್ಳು ವದಂತಿ ಹಬ್ಬಿಸುವುದರಿಂದ ಉದ್ಯಮದ ಮೇಲೆ ಮತ್ತು ಅವಲಂಬಿತ ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಇದೇ ವೇಳೆ ಕಿಶೋರ್ ಕುಮಾರ್ ತಿಳಿಸಿದರು.

ಕುಕ್ಕುಟೋದ್ಯಮ, ಹೈನುಗಾರಿಕೆ, ಮತ್ತು ಜವಳಿ ಉದ್ಯಮವನ್ನು ಜನರು ಮತ್ತು ರೈತರು ಹೆಚ್ಚು ಅವಲಂಬಿತರಾಗಿದ್ದು, ಈ ಉದ್ಯಮಗಳು ನೆಲಕಚ್ಚಿದರೆ ದೇಶದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಅನೇಕ ತಜ್ಞರು, ಪಶುವೈದ್ಯರು ಕುಕ್ಕುಟಗಳಿಂದ ಕೊರೋನ ವೈರಸ್ ಹರಡುವುದಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಜನರು ಇಂತಹ ಸುಳ್ಳು ಸುದ್ಧಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ ಅವರು, ಯಾವ ಉದ್ದೇಶದಿಂದ ಇಂತಹ ಸುಳ್ಳು ಸುದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೋ ಗೊತ್ತಿಲ್ಲ, ಆದರೆ, ಕೋಳಿಗಳಿಂದ ಕೊರೋನ ವೈರಸ್ ಹರಡುತ್ತದೆ ಎಂಬ ವದಂತಿಯಿಂದ ದೇಶದ ಜನರು ಭೀತಿ ಮತ್ತು ಭಯದಿಂದ ಬದುಕುವಂತೆ ಮಾಡಿದೆ. ಆದರೆ, ಕುಕ್ಕುಟಗಳಿಗೂ ಮತ್ತು ಕೊರೋನ ವೈರಸ್‍ಗೂ ಯಾವುದೇ ಸಂಬಂಧವಿಲ್ಲ, ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕಿಶೋರ್ಕ ಕುಮಾರ್ ಸ್ಪಷ್ಟನೆ ನೀಡಿದರು.

ಜಿಲ್ಲೆಯ ಬಯಲುಸೀಮೆ ಭಾಗದ ಅನೇಕ ರೈತರು ಕುಕ್ಕುಟೋದ್ಯಮವನ್ನು ಅವಲಂಭಿಸಿದ್ದಾರೆ. ಇದೀಗ ಉದ್ಯಮ ನಷ್ಟದಲ್ಲಿರುವುದರಿಂದ ರೈತರು ಸಾಕಣೆ ಮಾಡಿದ ಕೋಳಿಗಳನ್ನು ಸಾಮೂಹಿಕವಾಗಿ ಸಾಯಿಸುವಂತಾಗಿದೆ. ಜಿಲ್ಲೆಯ ರೈತರೂ ನಷ್ದಲ್ಲಿದ್ದಾರೆ. ಶಾಖಾಹಾರವನ್ನು ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದರಿಂದ ಕೊರೋನ ವೈರಸ್ ಕುಕ್ಕುಟಗಳಿಂದ ಹರಡುವುದಿಲ್ಲ. ಕುಕ್ಕುಟಗಳಿಂದ ಕೊರೋನ ವೈರಸ್ ಹರಡುತ್ತದೆ ಎಂಬ ಸುಳ್ಳು ವದಂತಿಯಿಂದ ದೇಶದ್ಯಾಂತ ಸುಮಾರು 8ರಿಂದ 10 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ. ಕುಕ್ಕುಟೋದ್ಯಮದಿಂದ ದೇಶದ ಜಿಡಿಪಿಗೆ ಒಂದು ಲಕ್ಷದ ಇಪ್ಪತ್ತು ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ.
- ಕಿಶೋರ್ ಕುಮಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News