ಸಂವಿಧಾನಕ್ಕೆ ಆರೆಸ್ಸೆಸ್, ಬಿಜೆಪಿ ಇಲಿಗಳ ರೀತಿ ಬಿಲ ತೋಡುತ್ತಿದೆ: ದೇವನೂರ ಮಹಾದೇವ

Update: 2020-03-12 14:29 GMT

ಬೆಂಗಳೂರು, ಮಾ.12: ಕೇಂದ್ರ ಸರಕಾರ ಜಾರಿಗೆ ಮುಂದಾಗಿರುವ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ಎನ್‌ಪಿಆರ್, ಎನ್‌ಆರ್‌ಸಿ ಹಾಗೂ ಹಿಂದೂ ರಾಷ್ಟ್ರ ನಿರ್ಮಾಣ ಹುನ್ನಾರವನ್ನು ವಿರೋಧಿಸಿ ಸಂವಿಧಾನ ರಕ್ಷಣಾ ಸಮಿತಿಯಿಂದ ರಾಜ್ಯಾದ್ಯಂತ ಉಪವಾಸ ಸತ್ಯಾಗ್ರಹವನ್ನು ನಡೆಸಲಾಯಿತು.

ಮಹಾತ್ಮ ಗಾಂಧೀಜಿ ದಂಡಿ ಉಪ್ಪಿನ ಸತ್ಯಾಗ್ರಹಕ್ಕೆ 90 ವರ್ಷಗಳು ಸಂದುತ್ತಿರುವ ಹಿನ್ನೆಲೆಯಲ್ಲಿ, ಅದೇ ದಿನದಂದು ಶಾಂತಿಯುತವಾಗಿ ಕೇಂದ್ರ ಸರಕಾರದ ವಿವಿಧ ನೀತಿ, ಕಾನೂನು, ಕಾಯ್ದೆಯ ವಿರುದ್ಧ ರಾಜ್ಯದ ಹಲವು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಉಪವಾಸ ಸತ್ಯಾಗ್ರಹದ ಮೂಲಕ ಸರಕಾರದ ನಿಲುವನ್ನು ಖಂಡಿಸಿದರು.

ರಾಜ್ಯ ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ರಾಜಧಾನಿ ಮೈಸೂರು, ಸಕ್ಕರೆ ನಾಡು ಮಂಡ್ಯ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬಳ್ಳಾರಿ, ರಾಯಚೂರು, ಶಿವಮೊಗ್ಗ, ಉಡುಪಿ, ಸಿಂಧನೂರು, ಮಾನ್ವಿ, ಚಿತ್ರದುರ್ಗ, ಚಿಕ್ಕಮಗಳೂರು, ಕೊಪ್ಪಳ, ವಿಜಯಪುರ, ಹೊಸಪೇಟೆ, ದಾವಣಗೆರೆ ಸೇರಿದಂತೆ 20 ಜಿಲ್ಲಾ ಮತ್ತು ವಿವಿಧ ತಾಲೂಕು ಕೇಂದ್ರಗಳಲ್ಲಿ ಸರ್ವ ಧರ್ಮದವರು ಒಂದುಗೂಡಿ ಸಿಎಎ, ಎನ್‌ಆರ್‌ಸಿ ವಿರುದ್ಧ ಧ್ವನಿಗೂಡಿಸಿದ್ದಾರೆ.

ಹಿರಿಯ ಸಾಹಿತಿ ದೇವನೂರ ಮಹಾದೇವ, ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್, ಲೇಖಕ ಶ್ರೀಪಾಧ್ ಭಟ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಧಾರವಾಡದಲ್ಲಿ ಹೋರಾಟಗಾರ ಮಹೇಶ್ ಪತ್ತಾರ, ಅನ್ವರ್ ಮುಧೋಳ ಸೇರಿದಂತೆ ಹಲವಾರು ಸಾಹಿತಿಗಳು, ಚಿಂತಕರು, ಹೋರಾಟಗಾರರು, ಧಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು.

ಮೈಸೂರಿನಲ್ಲಿ ಹಿರಿಯ ಸಾಹಿತಿ ದೇವನೂರ ಮಹಾದೇವ, ದೇಶದಲ್ಲಿರುವ ಅನೇಕ ಸಮಸ್ಯೆಗಳನ್ನು ಮರೆಮಾಚುವ ಉದ್ದೇಶದಿಂದ ಕೇಂದ್ರ ಸರಕಾರ ಈ ಸಿಎಎ, ಎನ್‌ಆರ್‌ಸಿಯನ್ನು ಜಾರಿಗೆ ಮುಂದಾಗಿದೆ. ಈ ಮೂಲಕ ಬಹುತ್ವವನ್ನು ನಾಶ ಮಾಡಿ, ಒಂದು ಧರ್ಮದ ದೇಶವನ್ನಾಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆಪಾದಿಸಿದರು.

ಜಾತ್ಯತೀತ, ಸಮಾನತೆಯ ಮೂಲ ಆಶಯಗಳನ್ನು ಪ್ರತಿಪಾದಿಸುವ ಅಂಬೇಡ್ಕರ್ ರೂಪಿಸಿರುವ ಸಂವಿಧಾನಕ್ಕೆ ಇಲಿಗಳ ರೀತಿಯಲ್ಲಿ ಬಿಲ ತೋಡುತ್ತಿರುವ ಆರೆಸ್ಸೆಸ್ ಮತ್ತು ಬಿಜೆಪಿಗೆ ದೇಶದ ವಿದ್ಯಾರ್ಥಿ, ಯುವಜನರು ಹಾಗೂ ಸಾಮಾನ್ಯ ಜನತೆ ತಕ್ಕ ಉತ್ತರ ನೀಡುತ್ತಿದ್ದಾರೆ. ರಾಜ್ಯಾದ್ಯಂತ ಇದರ ವಿರುದ್ಧ ಸಂಘಟಿತರಾಗಿ ಚಳವಳಿಗೆ ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.

ಬೆಂಗಳೂರಿನಲ್ಲಿ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ದಲಿತ, ಹಿಂದುಳಿದ, ಬಡವರ, ಮಹಿಳೆಯರ ವಿರುದ್ಧವಾದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರಕಾರ ಹಿಂಪಡೆಯಬೇಕು. ಅಲ್ಲದೆ, ಜನಪ್ರತಿನಿಧಿಗಳು ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಈ ಮಟ್ಟದ ಪ್ರತಿರೋಧ ಎದುರಿಸುತ್ತಿರುವ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕೈಬಿಡಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಅನೇಕ ತ್ಯಾಗ ಬಲಿದಾನಗಳಿಂದ ಸಿಕ್ಕ ಸ್ವಾತಂತ್ರ ಹಾಗೂ ಅಂಬೇಡ್ಕರ್ ರಚಿಸಿರುವ ಸಂವಿಧಾನಕ್ಕೆ ಇಂದು ಕುತ್ತುಬಂದಿದೆ. ಮತ ಹಾಕಿ ಗೆಲ್ಲಿಸಿದವರೇ ಇಂದು ಅವರಿಗೆ ನಮ್ಮ ಪೌರತ್ವವನ್ನು ಸಾಬೀತುಪಡಿಸಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ನಮ್ಮ ಆಂದೋಲನವು ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧಿಯವರು ಹಾಕಿಕೊಟ್ಟ ಪರಂಪರೆಯಂತೆಯೇ ಅಹಿಂಸಾತ್ಮಕವಾಗಿ ಇರಲಿದ್ದು, ಗುರಿ ಮುಟ್ಟುವವರೆಗೂ ನಿಲ್ಲುವುದಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News