ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆ

Update: 2020-03-12 14:48 GMT

ಬೆಂಗಳೂರು, ಮಾ. 12: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕಿತರ ಸಂಖ್ಯೆ ಐದಕ್ಕೆ ಏರಿದ್ದು, ಸೋಂಕು ಪೀಡಿತ ವ್ಯಕ್ತಿಯನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ಸೋಂಕು ಪೀಡಿತ ವ್ಯಕ್ತಿ ಮೂಲತಃ ಮುಂಬೈ ನಿವಾಸಿಯಾಗಿದ್ದು, ಗ್ರೀಸಿನಿಂದ ಮುಂಬೈಗೆ ಮಾ.6ರಂದು ಆಗಮಿಸಿದ್ದಾರೆ. ನಂತರ ಮಾ.8ರಂದು ಮುಂಬೈನಿಂದ ವಿಮಾನ ಪ್ರಯಾಣದ ಮೂಲಕ ಕೆಂಪೇಗೌಡ ಅಂತರ್‌ರಾಷ್ಟ್ರೀಯ ನಿಲ್ದಾಣದಲ್ಲಿ ಬೆಂಗಳೂರು ತಲುಪಿದ್ದಾರೆ. ಅನಂತರ ಇವರು ಮಾ.9ರಂದು ಕಚೇರಿಗೆ ತೆರಳಿದ್ದಾರೆ ಎಂದು ಹೇಳಿದ್ದಾರೆ.

ಕಚೇರಿಯಲ್ಲಿ 154 ಉದ್ಯೋಗಿಗಳಿದ್ದು ಅವರ ಯಾರ ಸಂಪರ್ಕಕ್ಕೂ ಬಾರದೆ ಕೆಲವೇ ಗಂಟೆಯಲ್ಲಿ ಕಚೇರಿಯಿಂದ ನಿರ್ಗಮಿಸಿದ್ದಾರೆ ಹಾಗೂ ಅದೇ ದಿನ ಆತ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರ ಸೋದರ ಮಾತ್ರ ಅವರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದು, ಪತ್ನಿ, ತಾಯಿ, ತಂದೆ ಎಲ್ಲರೂ ಮುಂಬೈನಲ್ಲಿ ವಾಸವಾಗಿದ್ದಾರೆ ಎಂದು ಶ್ರೀರಾಮುಲು ಮಾಹಿತಿ ನೀಡಿದ್ದಾರೆ.

ಈತ ಬೆಂಗಳೂರಿಗೆ ಬಂದಾಗ ಆಟೋರಿಕ್ಷಾದಲ್ಲಿ ಪ್ರಯಾಣ ಮಾಡಿದ್ದು ಆಟೋ ಚಾಲಕ ಸಂಪರ್ಕಕ್ಕೆ ಬಂದಿದ್ದಾರೆ. ಆ ಆಟೋ ಚಾಲಕನ ಮನೆಯಲ್ಲಿ ಮೂವರು ಸದಸ್ಯರಿದ್ದಾರೆ. ಸಮಗ್ರ ಮಾಹಿತಿ ಕಲೆ ಹಾಕಿರುವ ಇಲಾಖೆಯ ಅಧಿಕಾರಿಗಳು, ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಸಚಿವ ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.

‘ಇಟಲಿಯ ರೋಮ್ ಹಾಗೂ ಮಿಲನ್ ನಗರದಲ್ಲಿ ಆತಂತ್ರರಾಗಿರುವ ಕನ್ನಡಿಗರು ನನ್ನನ್ನು ಸಂಪರ್ಕಿಸಿದ್ದಾರೆ. ನಾನು ಈಗಾಗಲೇ ಕೇಂದ್ರ ಆರೋಗ್ಯ ಮಂತ್ರಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದು, ಇಂದೇ ಅವರನ್ನು ಇಟಲಿಯಿಂದ ಭಾರತಕ್ಕೆ ಕರೆತರುವ ವ್ಯವಸ್ಥೆ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಕನ್ನಡಿಗರ ಹಾಗೂ ಕರ್ನಾಟಕದ ಸೇವೆಗೆ ನಮ್ಮ ಸರಕಾರ ಸದಾ ಸಿದ್ಧವಿದ್ದು, ಕೊರೋನ ವೈರಸ್‌ನಿಂದಾಗಿ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದೆ’

-ಬಿ.ಶ್ರೀರಾಮುಲು, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News