ಪಿಎಚ್‌ಡಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಹಿರಂಗ ಆರೋಪ: 3ನೇ ಬಾರಿಗೆ ಪರೀಕ್ಷೆ ಮುಂದೂಡಿಕೆ

Update: 2020-03-12 16:51 GMT

ಕಲಬುರಗಿ, ಮಾ.12: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆಯಬೇಕಾಗಿದ್ದ ಪಿಎಚ್‌ಡಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಹಿರಂಗಗೊಳಿಸಿದ ಆರೋಪ ಕೇಳಿ ಬಂದಿದ್ದು, ಮೂರನೇ ಬಾರಿಗೆ ಈ ಪಿಎಚ್‌ಡಿ ಪ್ರವೇಶ ಪರೀಕ್ಷೆಯನ್ನು ಮುಂದೂಡಲಾಗಿದೆ.

ಗುರುವಾರ ಪ್ರಾರಂಭವಾದ ರಾಜ್ಯಶಾಸ್ತ್ರ ವಿಭಾಗದ 9 ಪಿಎಚ್‌ಡಿ ಸೀಟುಗಳಿಗೆ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಲಕೋಟೆಯಿಂದ ಬಿಚ್ಚದೆ ಹಾಗೆ ನೀಡಲಾಗಿದೆ ಎಂದು ಆರೋಪಿಸಿ ಅಭ್ಯರ್ಥಿಗಳು ಮೌಲ್ಯಮಾಪನ ಕುಲಸಚಿವರ ಕಚೇರಿ ಮುಂದೆ ದಿಢೀರನೆ ಪ್ರತಿಭಟನೆ ನಡೆಸಿ, ಕುಲ ಸಚಿವ ಪ್ರೊ. ಸಂಜೀವ ಕುಮಾರ್‌ಗೆ ಮುತ್ತಿಗೆ ಹಾಕಿದರು. 'ಪರೀಕ್ಷಾ ಕೇಂದ್ರದಲ್ಲಿ ಲಕೋಟೆಯನ್ನು ಅಭ್ಯರ್ಥಿಗಳ ಮುಂದೆ ಬಿಚ್ಚಲ್ಲ. ಹೀಗಾಗಿ ಪರೀಕ್ಷೆಗೆ ಮುನ್ನವೇ ತಮಗೆ ಬೇಕಾದವರಿಗೆ ಪ್ರಶ್ನೆಪತ್ರಿಕೆ ನೀಡಿರುವ ಅನುಮಾನ ಇದೆ. ಪಾರದರ್ಶಕ ಪರೀಕ್ಷೆ ನಡೆಸುವಲ್ಲಿ ವಿವಿ ವಿಫಲವಾಗಿದೆ ಎಂದು ಪ್ರತಿಭಟನಾ ನಿರತ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಪಿಎಚ್‌ಡಿ ಪರೀಕ್ಷೆ ಈ ಹಿಂದೆ ಎರಡು ಬಾರಿ ಮುಂದೂಡಿಕೆಯಾಗಿ ಗುರುವಾರ ಮೂರನೆಯ ಬಾರಿಗೆ ಪರೀಕ್ಷೆ ನಡೆಯುತ್ತಿತ್ತು. ಮೊದಲ ಬಾರಿ ಪ್ರವೇಶ ಪರೀಕ್ಷೆ ನಡೆದಾಗ ಪ್ರಶ್ನೆಪತ್ರಿಕೆಯನ್ನು ಕೇವಲ ಇಂಗ್ಲಿಷ್‌ನಲ್ಲಿ ಕೊಡಲಾಗಿತ್ತು. ಕನ್ನಡದಲ್ಲಿ ಪ್ರಶ್ನೆ ಪತ್ರಿಕೆ ಇಲ್ಲದಿರುವ ಕಾರಣ ಟೀಕೆಗೆ ಗುರಿಯಾಗಿ ಮುಂದೂಡಲಾಗಿತ್ತು.

ಎರಡನೇ ಬಾರಿ ಪರೀಕ್ಷೆ ನಡೆಸಿದರೂ, ಕೀ ಉತ್ತರದಲ್ಲಿ ಸಾಕಷ್ಟು ತಪ್ಪಿದ್ದವು. ಆಗ ಕೀ ಉತ್ತರವನ್ನು ಸರಿಪಡಿಸುವ ಬದಲಿಗೆ ಪರೀಕ್ಷೆಯನ್ನು ರದ್ದು ಮಾಡಿತ್ತು. ಇದೀಗ ಮೂರನೇ ಬಾರಿಗೆ ಪ್ರಶ್ನೆ ಪತ್ರಿಕೆಯನ್ನು ಬಹಿರಂಗಗೊಳಿಸಿದ ಆರೋಪ ಕೇಳಿ ಬಂದಿದೆ.

ಪ್ರಶ್ನೆ ಪರೀಕ್ಷೆ ಬಹಿರಂಗವಾದ ಆರೋಪ ಹಿನ್ನೆಲೆಯಲ್ಲಿ ಯಾವ ಅಭ್ಯರ್ಥಿಗಳು ಪರೀಕ್ಷೆಗೆ ಕೂಡಲಿಲ್ಲ. ಕುಲಸಚಿವ ಪ್ರೊ.ಸಂಜೀವಕುಮಾರ್ ಅಭ್ಯರ್ಥಿಗಳ ಮನವೊಲಿಸಲು ಪ್ರಯತ್ನ ಪಟ್ಟರೂ ಪಟ್ಟು ಸಡಿಸಲಿಲ್ಲ. ಆದ್ದರಿಂದ ಗುರುವಾರ ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗುತ್ತದೆ ಎಂದು ಕುಲಸಚಿವರು ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News