×
Ad

ಕಲಬುರಗಿಯಲ್ಲಿ ಮೃತಪಟ್ಟಿದ್ದ ವ್ಯಕ್ತಿಗೆ ಕೊರೋನ ವೈರಸ್ ದೃಢ: ಭಾರತದಲ್ಲಿ ಮೊದಲ ಬಲಿ

Update: 2020-03-12 22:37 IST

ಕಲಬುರಗಿ, ಮಾ.12: ಕಲಬುರಗಿಯಲ್ಲಿ ನಿನ್ನೆ ಮೃತಪಟ್ಟಿದ್ದ ವ್ಯಕ್ತಿಗೆ ಕೊರೋನ ವೈರಸ್ ದೃಢಪಟ್ಟಿದ್ದು, ಈ ಮೂಲಕ ಕೊರೋನ ವೈರಸ್ ನಿಂದ ದೇಶದಲ್ಲಿ ಮೊದಲ ಸಾವು ಉಂಟಾಗಿದೆ.

ಮೃತ ವ್ಯಕ್ತಿ ಫೆ.29ರಂದು ಸೌದಿಯಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಮಾ.5ರಂದು ಅವರ ಪರೀಕ್ಷೆ ನಡೆಸಿ, ಮಾ.6ರಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಾ.9ರಂದು ಅವರು ಸ್ವ ಇಚ್ಛೆಯಿಂದ ಹೈದರಾಬಾದ್‌ಗೆ ಹೋಗಿದ್ದರು. ಬಳಿಕ ಅಲ್ಲಿಂದ ಹಿಂದಿರುಗಿದ ಅವರು ನಿನ್ನೆ ಕಲಬುರಗಿಯಲ್ಲಿ ಮೃತಪಟ್ಟಿದ್ದರು. 

ಮೊದಲು ಮೃತ ವ್ಯಕ್ತಿಯಲ್ಲಿ ಯಾವುದೇ ಕೊರೋನ ಸೋಂಕು ದೃಢಪಟ್ಟಿಲ್ಲ ಎಂದು ಹೇಳಲಾಗಿತ್ತು. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು, ಕಲಬುರಗಿಯ ವೃದ್ಧ ಕೊರೋನ ವೈರಸ್‌ನಿಂದ ಮೃತಪಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಇಂದು ಮೃತ ವ್ಯಕ್ತಿ ಕೊರೋನದಿಂದಲೇ ಮೃತಪಟ್ಟಿದ್ದಾರೆ ಎಂದು ದೃಢಪಟ್ಟಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇದನ್ನು ಸ್ಪಷ್ಟಪಡಿಸಿದೆ.

'ಮೃತ ವ್ಯಕ್ತಿಯ ಮನೆಯವರಿಗೂ ಈಗಾಗಲೇ ಕೊರೋನ ತಪಾಸಣೆ ನಡೆಸಲಾಗಿದ್ದು, ಯಾರೊಬ್ಬರಿಗೂ ವೈರಸ್ ತಗುಲಿರುವುದಾಗಲಿ ಅಥವಾ ಆ ಲಕ್ಷಣಗಳು ಕಂಡು ಬಂದಿರುವುದಾಗಲಿ ಇಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಅವರ ಅಂತ್ಯಕ್ರಿಯೆ ಸಂಪೂರ್ಣ ಉಸ್ತುವಾರಿಯನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ ಮತ್ತು ತಂಡ ವಹಿಸಿಕೊಂಡು ಎಲ್ಲಾ ರೀತಿಯ ಮುಂಜಾಗ್ರತೆ ಮತ್ತು ನಿಯಂತ್ರಣ ಕೈಗೊಂಡು ವರದಿ ನೀಡಲು ಜಿಲ್ಲಾ ಆರೋಗ್ಯ ಇಲಾಖೆ ಆದೇಶ ನೀಡಿದೆ.

'ವೃದ್ಧ ಕೊರೋನದಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ವೈದ್ಯಕೀಯ ವರದಿ ಬಂದ ಬಳಿಕ ಮಾಹಿತಿ ನೀಡಿದ್ದೇವೆ. ಕೊರೋನ ಹರಡದಂತೆ ಮುಂಜಾಗೃತಾ ಕ್ರಮ ವಹಿಸಲಾಗಿದೆ ಎಂದು ಬಿ.ಶ್ರೀರಾಮುಲು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News