ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಶಿಫಾರಸು ಪತ್ರ ಪರಿಗಣಿಸಲ್ಲ: ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಕೆ

Update: 2020-03-12 17:56 GMT

ಬೆಂಗಳೂರು, ಮಾ.12: ನಿಯಮಬಾಹಿರವಾಗಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಜನಪ್ರತಿನಿಧಿಗಳು ನೀಡುವ ಶಿಫಾರಸು ಪತ್ರಗಳನ್ನು ತಿರಸ್ಕಾರ ಮಾಡಲಾಗುತ್ತದೆ ಎಂದು ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ರಜನೀಶ್ ಗೋಯಲ್ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಈ ಕುರಿತು ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ.ಶಿಶಿಧರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಪೊಲೀಸ್ ಸಿಬ್ಬಂದಿ ಮಂಡಳಿಯೇ ನಿಯಮಗಳ ಅನುಸಾರವಾಗಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಯನ್ನು ಮಾಡುತ್ತದೆ. ವರ್ಗಾವಣೆಯಲ್ಲಿ ಜನಪ್ರತಿನಿಧಿಗಳು ನೀಡುವ ಶಿಫಾರಸು ಪತ್ರಗಳನ್ನೂ ತಿರಸ್ಕಾರ ಮಾಡಲಾಗುತ್ತದೆ ಎಂದು ರಜನೀಶ್ ಗೋಯಲ್ ಪ್ರಮಾಣ ಪತ್ರ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಕೂಡ ಈ ಹಿಂದೆ ಪೊಲೀಸರ ವರ್ಗಾವಣೆಯಲ್ಲಿ ಜನಪ್ರತಿನಿಧಿಗಳ ಶಿಫಾರಸು ಪತ್ರಗಳನ್ನು ಪರಿಗಣಿಸಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದರು. ಆದರೆ, ಶಾಂತಿನಗರ ಶಾಸಕ ಎನ್.ಎ.ಹಾರಿಸ್ ಅವರು ಯಾಕೆ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಗೆ ನಿರ್ದಿಷ್ಟ ಅಧಿಕಾರಿಯೊಬ್ಬರನ್ನು ವರ್ಗಾಯಿಸುವಂತೆ ಶಿಫಾರಸು ಮಾಡಿದರು ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಹಾರಿಸ್ ಪರ ವಕೀಲರು, ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆ ಸೂಕ್ಷ್ಮ ಪ್ರದೇಶವಾಗಿದ್ದು, ಆ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಇರಲಿಲ್ಲ. ಹೀಗಾಗಿ, ನೇಮಕಕ್ಕೆ ಶಿಫಾರಸು ಮಾಡಲಾಯಿತು ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ತನಿಖೆಗೆ ಎಸ್‌ಐಟಿ ರಚಿಸುವ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿತು. ಅರ್ಜಿದಾರರ ಪರವಾಗಿ ನ್ಯಾಯವಾದಿ ಜಿ.ಆರ್.ಮೋಹನ್ ಅವರು ವಾದಿಸಿದರು.

ಪ್ರಕರಣವೇನು: ಸುಪ್ರೀಂಕೋರ್ಟ್, ಪ್ರಕಾಶ್ ಸಿಂಗ್ ಮತ್ತು ಕೇಂದ್ರ ಸರಕಾರದ ನಡುವಿನ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಯನ್ನು ಪೊಲೀಸ್ ಸಿಬ್ಬಂದಿ ಮಂಡಳಿಯೇ ನಡೆಸಬೇಕು ಎಂದು 2006ರಲ್ಲಿ ಆದೇಶಿಸಿದೆ. ಹೈಕೋರ್ಟ್ ಸಹ 2017ರಲ್ಲಿ ಈ ಸಂಬಂಧದ ಪಿಐಎಲ್ ವಿಚಾರಣೆ ನಡೆಸಿ, ವರ್ಗಾವಣೆಗಳನ್ನು ನಿಯಮದ ಪ್ರಕಾರವೇ ಮಾಡಬೇಕೆಂದು ಆದೇಶ ನೀಡಿದೆ. ಆದರೂ ಶಾಸಕರು, ಸಂಸದರ ಶಿಫಾರಸಿನ ಮೇರೆಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ನಿಯಮ ಬಾಹಿರವಾಗಿ ಶಿಫಾರಸು ಮಾಡಿದ 24 ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಲು 2019ರ ಜ.12ರಂದು ಸ್ಪೀಕರ್‌ಗೆ ದೂರು ನೀಡಲಾಗಿದೆ. ಆ ದೂರಿನ ಅನ್ವಯ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಸ್‌ಐಟಿ ತನಿಖೆಗೆ ನಿರ್ದೇಶಿಸಬೇಕು. ಕೋರ್ಟ್ ಆದೇಶದಂತೆ ವರ್ಗಾವಣೆಗಳನ್ನು ಕಡ್ಡಾಯವಾಗಿ ಪೊಲೀಸ್ ಸಿಬ್ಬಂದಿ ಮಂಡಳಿ ಮೂಲಕವೇ ಮಾಡುವಂತೆ ಸೂಚನೆ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News