ಕೊರೋನ ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ವಿಫಲ: ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಮಾ.13: ದೇಶದಲ್ಲಿಯೇ ಮೊದಲ ಬಾರಿಗೆ ಕೊರೋನ ವೈರಸ್‌ನಿಂದ ರಾಜ್ಯದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿರುವುದು ದುರಂತ ಸಂಗತಿಯಾಗಿದ್ದು, ಇದಕ್ಕೆ ರಾಜ್ಯ ಸರಕಾರದ ವೈಫಲ್ಯವೇ ಕಾರಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ವಿಧಾನಸಭೆಯಲ್ಲಿ ನಡೆದ ಶೂನ್ಯ ವೇಳೆ ಚರ್ಚೆಯಲ್ಲಿ ಅವರು, ಕರ್ನಾಟಕದಲ್ಲಿ ಕೊರೋನ ವೈರಸ್ ಭೀತಿ ಹೆಚ್ಚಾಗುತ್ತಿದೆ. ಇದುವರೆಗೂ 5 ಜನರಲ್ಲಿ ಕೊರೋನ ಸೊಂಕು ಪತ್ತೆಯಾಗಿದ್ದು, ಕೊರೋನ ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ಮತ್ತು ಆರೋಗ್ಯ ಇಲಾಖೆ ವಿಫಲವಾಗಿದೆ ಎಂದು ದೂರಿದರು.
ಇಡೀ ದೇಶದಲ್ಲೇ ಕೊರೋನ ರೋಗಕ್ಕೆ ಮೊದಲು ಬಲಿಯಾಗಿದ್ದು, ಕಲಬುರಗಿಯವರು ಎಂಬುದು ದುಃಖಕರ. ಮೃತ ಸಿದ್ದೀಕಿ ಅವರಿಗೆ ಚಿಕಿತ್ಸೆ ನೀಡಲು ಹೈದರಾಬಾದ್‌ನ ಹಲವು ಆಸ್ಪತ್ರೆಗಳು ತಿರಸ್ಕರಿಸಿದವು. ಚಿಕಿತ್ಸೆಗಾಗಿ ಐದಾರು ಆಸ್ಪತ್ರೆಗಳಿಗೆ ಅವರನ್ನು ಕರೆದುಕೊಂಡು ಅಲೆದಾಡಬೇಕಾಯ್ತು. ಈ ವಿಳಂಬದಿಂದಾಗಿ ಅವರ ಪ್ರಾಣಹಾನಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೊರೋನ ಸೋಂಕು ಕಾಣಿಸಿಕೊಂಡು ವಾರ ಕಳೆದಿದೆ. ಒಬ್ಬರು ಮೃತಪಟ್ಟು, ಐವರಿಗೆ ರೋಗ ದೃಢಪಟ್ಟಿದೆ. ರಕ್ತ ಮಾದರಿ ಪರೀಕ್ಷೆಗೆ ರಾಜ್ಯದಲ್ಲಿರುವುದೇ 5 ಪ್ರಯೋಗಾಲಯಗಳು, ಜಿಲ್ಲಾ ಕೇಂದ್ರಗಳಲ್ಲಿ ಪ್ರಯೋಗಾಲಯ ವ್ಯವಸ್ಥೆ ಇಲ್ಲ. ಅದೇ ರೀತಿ, ವಿಮಾನ ನಿಲ್ದಾಣವಿರುವ ಜಿಲ್ಲಾ ಕೇಂದ್ರಗಳಲ್ಲಿಯೂ ಇಲ್ಲ. ಜೀವನ್ಮರಣದ ಪ್ರಶ್ನೆಯಾಗಿರುವ ಕೊರೋನ ವಿಚಾರದಲ್ಲಿ ಅಸಡ್ಡೆ ಬೇಡ ಎಂದರು.
ಮಾರಕ ರೋಗದ ಬಗ್ಗೆ ಭಯದ ವಾತಾವರಣ ಇರುವಾಗ ಸರಕಾರ ಜನರಿಗೆ ಪುಕ್ಕಟೆ ಸಲಹೆ-ಎಚ್ಚರಿಕೆ ನೀಡಿ ಸಮಯ ವ್ಯರ್ಥ ಮಾಡಬಾರದು. ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿ, ಸರಕಾರ ನಮ್ಮೊಂದಿಗಿದೆ ಎಂದು ಜನರಲ್ಲಿ ವಿಶ್ವಾಸ ಮೂಡಿಸುವಂತಹ ಕಾರ್ಯ ತುರ್ತಾಗಿ ಆಗಬೇಕು. ಇದು ರಾಜಕೀಯ ಆರೋಪವಲ್ಲ, ವೈಯಕ್ತಿಕ ಸಲಹೆ ಎಂದು ಪರಿಗಣಿಸಿ ಜನರ ಜೀವ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಿದ್ದರಾಮಯ್ಯ ನುಡಿದರು.
‘ಮನೆ ಮನೆಗೆ ತೆರಳಿ, ಜಿಲ್ಲಾ ಕೇಂದ್ರ ಸ್ಥಾಪಿಸಿ’
ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ರಕ್ತ ಮಾದರಿ ಪರೀಕ್ಷೆಗೆ ಪ್ರಯೋಗಾಲಯ ತೆರೆಯಲು ಸರಕಾರ ತಕ್ಷಣ ಕ್ರಮಕೈಗೊಳ್ಳಬೇಕು. ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಜನರ ಆರೋಗ್ಯದ ಮಾಹಿತಿ ಪಡೆಯಬೇಕು.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ