ತರೀಕೆರೆ: ಸರಕಾರಿ ಕಚೇರಿಯಲ್ಲಿ ವಿದ್ಯುತ್ ಅವಘಡ; ಕಡತಗಳು ಭಸ್ಮ
Update: 2020-03-13 22:06 IST
ತರೀಕೆರೆ, ಮಾ.13: ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಪಟ್ಟಣದ ಗಾಳಿಹಳ್ಳಿ ಕ್ರಾಸ್‍ನಲ್ಲಿರುವ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಚೇರಿ ಬೆಂಕಿಗೆ ಆಹುತಿಯಾದ ಘಟನೆ ಶುಕ್ರವಾರ ಸಂಜೆ ವರದಿಯಾಗಿದೆ.
ಶುಕ್ರವಾರ ಸಂಜೆ ಕಚೇರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ದಿಢೀರನೆ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೆ ಕಚೇರಿ ಸಿಬ್ಬಂದಿ ಹೊರಕ್ಕೆ ಬಂದಿದ್ದರಿಂದ ಅನಾಹುತ ತಪ್ಪಿದೆ. ಆದರೆ ಕ್ಷಿಪ್ರ ಗತಿಯಲ್ಲಿ ಹೊತ್ತಿಕೊಂಡ ಬೆಂಕಿ ಕಚೇರಿಯಲ್ಲಿದ್ದ ಕಡತಗಳನ್ನು ಭಸ್ಮ ಮಾಡಿದೆ ಎಂದು ತಿಳಿದು ಬಂದಿದೆ.
ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಿಯಂತ್ರಿಸಿದ್ದು, ಬೆಂಕಿಯಿಂದಾಗಿ ಕಚೇರಿಯಲ್ಲಿದ್ದ ಪೀಠೋಪಕರಣಗಳು, ಕಡತಗಳು, ಕಂಪ್ಯೂಟ್‍ಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಸುಟ್ಟುಹೋಗಿವೆ. ಘಟನೆ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.