ಕೊಡಗಿನಲ್ಲಿ ಕೊರೋನ ಪ್ರಕರಣ ಪತ್ತೆಯಾಗಿಲ್ಲ: ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್
ಮಡಿಕೇರಿ, ಮಾ.13: ಕೊಡಗು ಜಿಲ್ಲೆಯಲ್ಲಿ ಕೊರೋನ ಸೋಂಕಿನ ಪ್ರಕರಣ ಇದುವರೆಗೆ ಪತ್ತೆಯಾಗಿಲ್ಲ. ಆದರೂ ಒಬ್ಬರು ಕೊಡಗು ವೈದ್ಯಕೀಯ ಕಾಲೇಜು ಆಸ್ಪತ್ರೆಯ ವಿಶೇಷ ವಾರ್ಡ್‍ನಲ್ಲಿ ದಾಖಲಾಗಿದ್ದು, ಕೊರೋನ ಸಂಬಂಧಿಸಿದಂತೆ ವರದಿಗಾಗಿ ಕಾಯಲಾಗುತ್ತಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ನಗರದ ಜಿ.ಪಂ.ಕೆಡಿಪಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೊಡಗಿನಲ್ಲಿ ಈವರೆಗೂ ಕೊರೋನ ಸೋಂಕಿನ ಪ್ರಕರಣ ವರದಿಯಾಗಿಲ್ಲ. ದುಬೈನಿಂದ ಮರಳಿದ ವ್ಯಕ್ತಿಯೋರ್ವರಿಗೆ ಗಂಟಲು ನೋವು ಕಾಡಿದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ಸ್ವಯಂ ದಾಖಲಾಗಿ ಪರೀಕ್ಷೆ ಕೈಗೊಂಡಿದ್ದಾರೆ. ಅವರ ರಕ್ತದ ಮಾದರಿಯನ್ನು ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಕೇರಳ ಗಡಿಭಾಗವಾಗಿರುವ ಕೊಡಗಿನಲ್ಲಿ ಕೊರೋನ ಸೋಂಕು ಹರಡದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರ್ಕಾರದ ನಿರ್ದೇಶನದಂತೆ ವಿದೇಶದಿಂದ ಮರಳುವ ಪ್ರವಾಸಿಗರ ಮೇಲೆ ಇದೀಗ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಕೊಡಗಿನಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸುವ ಯಾವುದೇ ತೀರ್ಮಾನ ಜಿಲ್ಲಾಡಳಿತ ಕೈಗೊಂಡಿಲ. ಜಿಲ್ಲೆಯಲ್ಲಿ ಕೊರೊನ ಸೋಂಕಿನ ಬಗ್ಗೆ ಯಾವುದೇ ರೀತಿಯ ಭಯ, ಆತಂಕ ಅನಗತ್ಯ, ಆದರೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆಯಿಂದ ಕೈಗೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಸದ್ಯಕ್ಕೆ ಪೊಲೀಸ್ ಕಂಟ್ರೋಲ್ ರೂಮ್ ನ 100 ಸಂಖ್ಯೆಗೆ ಕರೆ ಮಾಡಿ ಕೊರೋನ ಸೋಂಕಿನ ಅನುಮಾನವಿದ್ದವರು ಮಾಹಿತಿ ನೀಡಬಹುದಾಗಿದೆ. ಜೊತೆಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಮೊಬೈಲ್ ಸಂಖ್ಯೆ: 9449843263, ಮಡಿಕೇರಿ ತಾಲೂಕು ಆರೋಗ್ಯಧಿಕಾರಿಗಳ ಮೊಬೈಲ್ ಸಂಖ್ಯೆ ಮಡಿಕೇರಿ 9449843203, ವಿರಾಜಪೇಟೆ 9448448481 ಮತ್ತು ಸೋಮವಾರಪೇಟೆ 9880996893 ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದು.
ಯಾವುದೇ ಸಂಶಯಾಸ್ಪದ ರೋಗಿಯ ವೈದ್ಯಕೀಯ ಪರೀಕ್ಷಾ ವರದಿಗಳನ್ನು ಪಕ್ಕದ ಮೈಸೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅವರು ಸ್ಪಷ್ಟಪಡಿಸಿದರು.
ವದಂತಿಗಳಿಗೆ ಕಿವಿಗೊಡಬೇಡಿ
ಕೊಡಗು ಜಿಲ್ಲೆಯ ಕಾಫಿ ಬೆಳೆಗಾರ ಸಂಘಟನೆಗಳು, ವೈದ್ಯರ ಸಂಘ, ಕಾರ್ಮಿಕರ ಸಂಘಟನೆ, ಹೋಂ ಸ್ಟೇಗಳು, ರೆಸಾರ್ಟ್‍ಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಲಾಗಿದ್ದು, ಎಲ್ಲರಿಗೂ ಕೊರೋನ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಕೊರೋನ ಸೋಂಕು ಸಂಬಂಧಿಸಿದಂತೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣರಾಗುತ್ತಿದ್ದಾರೆ. ಇಂಥ ಸುಳ್ಳು ಸಂದೇಶಗಳ ಮೇಲೂ ಜಿಲ್ಲಾಡಳಿತ ನಿಗಾ ವಹಿಸಲಿದೆ. ಇಂಥ ವದಂತಿಗಳಿಗೆ ಯಾರೂ ಕಿವಿಗೊಡದಿರಿ. ಯಾವುದೇ ಅಧಿಕೃತ ಮಾಹಿತಿಯಿದ್ದರೂ ಜಿಲ್ಲಾಡಳಿತದಿಂದಲೇ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಮಾಹಿತಿ ನೀಡಿ, ಕೆಮ್ಮು, ಶೀತ ಬಾಧಿತರು ಮಾಸ್ಕ್ ಧರಿಸಬೇಕೇ ವಿನಃ ಅನಗತ್ಯವಾಗಿ ಮಾಸ್ಕ್ ಧರಿಸಬೇಕಾಗಿಲ್ಲ ಎಂದರು.
ಪಶುವೈದ್ಯಕೀಯ ಇಲಾಖೆಯ ಅಧಿಕಾರಿ ತಮ್ಮಯ್ಯ ಮಾತನಾಡಿ, ಹಕ್ಕಿಜ್ವರ ಪ್ರಕರಣಗಳೂ ರಾಜ್ಯದ ಕೆಲವೆಡೆ ವರದಿಯಾಗುತ್ತಿದ್ದು ಈ ನಿಟ್ಟಿನಲ್ಲಿಯೂ ಕೊಡಗಿನಲ್ಲಿ ಗಮನಹರಿಸಿ ಮುಂಜಾಗ್ರತೆ ವಹಿಸಲಾಗಿದೆ ಎಂದರು. ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ಶಿವಕುಮಾರ್ ಹಾಜರಿದ್ದರು.