ಜ್ಞಾನದ ಜೊತೆಗೆ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವೂ ಹೆಚ್ಚಾಗಲಿ

Update: 2020-03-13 18:10 GMT

ಮಾರ್ಚ್, ಎಪ್ರಿಲ್ ಬಂತೆಂದರೆ ಸಾಕು ಪರೀಕ್ಷೆ ಮತ್ತು ಫಲಿತಾಂಶದ ಸಮಯ. ತನ್ನ ಮಗ/ಮಗಳು ಅತ್ಯುತ್ತಮ ರ್ಯಾಂಕ್ ಪಡೆಯಬೇಕೆಂಬುದು ಪ್ರತಿಯೊಬ್ಬ ಪೋಷಕರ ಆಶಯ. ಆ ನಿಟ್ಟಿನಲ್ಲಿ ಪೋಷಕರಂತೂ ತಮ್ಮ ಮಕ್ಕಳನ್ನು ಓದಿಸಿದ್ದೇ ಓದಿಸಿದ್ದು. ತಮ್ಮ ಕೆಲಸಕಾರ್ಯಗಳಿಗೂ ರಜೆ ಹಾಕಿ ಓದಿಸುವ ಎಷ್ಟೋ ಪೋಷಕರನ್ನು ನೋಡಬಹುದು. ಆದರೆ ತಮ್ಮ ಮಕ್ಕಳಿಗೆ ಏನು ಬೇಕು, ಏನು ಬೇಡ ಎಂಬುದನ್ನು ನಿರ್ಧರಿಸುವುದೇ ಇಲ್ಲ ಹಾಗೂ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಸಮುದಾಯವು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಅವುಗಳಲ್ಲಿ ಪ್ರಮುಖವಾಗಿ ಪರೀಕ್ಷಾ ಭಯ, ಖಿನ್ನತೆ, ಆತಂಕ, ಮಾನಸಿಕ ಅಸ್ವಸ್ಥತೆ, ಅಂತರ್ಜಾಲದ ಚಟ, ಹುಚ್ಚುತನದ ಪ್ರೀತಿ, ಆಕರ್ಷಣೆ ಮತ್ತು ಮಾದಕ ವಸ್ತುಗಳ ಸೇವನೆ ಮುಂತಾದವು. ಇಂತಹವುಗಳಿಗೆ ಒಳಗಾಗಿ ಕಿರಿಯ ವಯಸ್ಸಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಾ ತಮ್ಮ ಅಮೂಲ್ಯವಾದ ಜೀವನವನ್ನು ತಾವೇ ಹಾಳುಮಾಡಿಕೊಳ್ಳುತಿದ್ದಾರೆ. ಇದಕ್ಕೆಲ್ಲಾ ಒಂದಲ್ಲಾ ಒಂದು ರೀತಿಯಾಗಿ ಶಿಕ್ಷಣ ವ್ಯವಸ್ಥೆ, ಪೋಷಕರು, ಶಿಕ್ಷಕರು ಮತ್ತು ಸಹಪಾಠಿಗಳು ಕಾರಣ ಎಂದರೆ ತಪ್ಪಾಗಲಾರದು. ಏಕೆಂದರೆ ಪೋಷಕರು ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಅಂಕಗಳಿಸುವುದನ್ನೇ ಮಾನದಂಡವಾಗಿಟ್ಟುಕೊಂಡು ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದುದರಿಂದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪಠ್ಯೇತರ ಹಾಗೂ ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸದೆ, ಪರಿಸರ ಮತ್ತು ಸಮಾಜದ ಜೊತೆ ಒಡನಾಟವಿಟ್ಟುಕೊಳ್ಳದೇ ಮಾನಸಿಕ ಅಸಮತೋಲನಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಆದರೆ ಪೋಷಕರು ಕೂಡ ತಮ್ಮ ಮಕ್ಕಳ ಫಲಿತಾಂಶವೇ ಅಂತಿಮವಲ್ಲ ಎಂದು ತಿಳಿದುಕೊಳ್ಳಬೇಕು. ಉತ್ತಮ ಫಲಿತಾಂಶ ಬಂದ ನಂತರ ಮುಂದೇನು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಆ ನಿಟ್ಟಿನಲ್ಲಿ ಯೋಚಿಸಿ ತಮ್ಮ ಮಕ್ಕಳನ್ನು ಜವಾಬ್ದಾರಿಯುತವಾಗಿ ಮತ್ತು ಸರಿಯಾದ ಮಾರ್ಗದಲ್ಲಿ ಸಮಾಲೋಚನಾ ಪರಿಯಲ್ಲಿ ಬೆಳಸಬೇಕು.

ತರಗತಿಯಲ್ಲಿ ಶಿಕ್ಷಕರು ಬರೀ ಬೋಧನೆಗೆ ಹೆಚ್ಚು ಸಮಯವನ್ನು ಮೀಸಲಿಟ್ಟು, ಜೀವನ ಕೌಶಲಗಳನ್ನು ಮತ್ತು ಮೌಲ್ಯಗಳನ್ನು ತಿಳಿಸದೆ, ಪರೀಕ್ಷೆಗೆ ಹೆಚ್ಚು ಒತ್ತು ನೀಡುತ್ತಿರುವುದು ಉತ್ತಮವಾದ ಬೆಳವಣಿಗೆಯಲ್ಲ. ಶಿಕ್ಷಕರು ತರಗತಿಗಳಲ್ಲಿ ವಿದ್ಯಾರ್ಥಿಗಳ ಆತ್ಮಸ್ಥೈರ್ಯ, ಆತ್ಮವಿಶ್ವಾಸ ಹೆಚ್ಚುವಂತಹ ಚಟುವಟಿಕೆಗಳನ್ನು ನೀಡಬೇಕು. ಎಂತಹ ಸನ್ನಿವೇಶ ಬಂದರೂ ಧೃತಿಗೆಡದೆ, ಸೂಕ್ತ ರೀತಿಯಲ್ಲಿ ಎದುರಿಸುವ ಸಾಮರ್ಥ್ಯವನ್ನು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ಶಿಕ್ಷಕರು ಕೂಡ ವಿದ್ಯಾರ್ಥಿಗಳ ತಪ್ಪನ್ನು ತಿದ್ದದೇ ಇರುವುದರಿಂದ, ಮರುತಪ್ಪಿಗೆ ಅವಕಾಶ ಮಾಡಿಕೊಟ್ಟಂತಾಗಿದೆ. ಪ್ರಸಕ್ತ ದಿನಗಳಲ್ಲಿ ವಿದ್ಯಾರ್ಥಿಗಳ ತಪ್ಪನ್ನು ತಿದ್ದುವುದು ಅಷ್ಟೊಂದು ಸುಲಭದ ಕೆಲಸವೂ ಅಲ್ಲ. ಇದಕ್ಕೆ ನಿದರ್ಶನವೆಂಬಂತೆ ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದಿದರೂ ಕಷ್ಟ ಎಂದು ಮಲೆನಾಡು ಭಾಗದ ವಿದ್ಯಾಸಂಸ್ಥೆಯೊಂದರ ಪ್ರಾಂಶುಪಾಲರೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಶಿಕ್ಷಕರನ್ನು ಬಿಟ್ಟರೆ ಉಳಿದ ಅತೀ ಹೆಚ್ಚಿನ ಸಮಯವನ್ನು ಕಳೆಯುವುದು ಸಹಪಾಠಿಗಳೊಂದಿಗೆ. ಆದುದರಿಂದ ಉತ್ತಮ ಸಹಪಾಠಿಗಳೊಡನೆ ಸ್ನೇಹ ಸಂಬಂಧ ಬೆಳೆಸುವುದು ಒಳ್ಳೆಯದು. ಇಲ್ಲದಿದ್ದರೆ ಸಹವಾಸ ದೋಷವೆಂಬಂತೆ ಹಾಳಾಗುವ ಸಮಯವು ಹೌದು. ಏಕೆಂದರೆ ಕೆಲ ಸಹಪಾಠಿಗಳು ತಮ್ಮ ಯುವ ವಯಸ್ಸಿನಲ್ಲಿ ಮನಸ್ಸಿಗೆ ಬಂದಂತೆ ಆಡುತ್ತಾ, ಭವಿಷ್ಯದ ಬಗ್ಗೆ ಚಿಂತಿಸದೆ, ತಾವೂ ಹಾಳಾಗುವುದಲ್ಲದೆ ಇತರ ಸಹಪಾಠಿಗಳನ್ನೂ ದುರಭ್ಯಾಸಕ್ಕೆ ಒಳಗಾಗುವಂತೆ ಪ್ರೇರೇಪಿಸುತ್ತಿರುತ್ತಾರೆ. ಆದುದರಿಂದ ಎಚ್ಚರದಿಂದರಬೇಕಾದುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ. ಅಂತರ್ಜಾಲವನ್ನು ಕಲಿಕೆಗೆ ಪೂರಕವಾಗಿ, ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಾಮಾನ್ಯ ಪ್ರಜ್ಞೆಯು ಎಷ್ಟೋ ವಿದ್ಯಾರ್ಥಿಗಳಿಗಿಲ್ಲ. ಕೆಲವು ವಿದ್ಯಾರ್ಥಿಗಳು ಅಂತರ್ಜಾಲದ ಮೂಲಕ ಸಾಮಾಜಿಕ ಮಾಧ್ಯಮಗಳಿಗೆ ಜೋತು ಬಿದ್ದು, ಸಾಮಾಜಿಕ ಸಾಮರಸ್ಯವನ್ನೇ ಹಾಳುಮಾಡುತ್ತಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಯ ಬ್ಯುರೋ ಪ್ರಕಾರ, 2000ನೇ ಇಸವಿಗೆ ಹೋಲಿಸಿದಾಗ 2010ರಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯು ಎರಡರಷ್ಟು ಹೆಚ್ಚಾಗಿದೆ. ಇದಕ್ಕೆ ಪ್ರಮುಖ ಕಾರಣ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಕಳಪೆ ಸಾಧನೆ. ಇನ್ನಿತರ ಕಾರಣಗಳೆಂದರೆ ಕೌಟುಂಬಿಕ ಸಮಸ್ಯೆ, ಅನಾರೋಗ್ಯ ಮತ್ತು ಪ್ರೀತಿ. 2014ರಿಂದ 2018ರವರೆಗೆ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಕಂಡು ಬಂದಿವೆ. 2016ರಿಂದ ಶೇ. 7 ಹೆಚ್ಚಿಗೆ ಆತ್ಮಹತ್ಯೆಯಾಗಿರುವುದು ವಿದ್ಯಾರ್ಥಿಗಳಿಂದಲೇ ಎಂಬುದು ವಿಶೇಷ. ವಿದ್ಯಾರ್ಥಿಗಳ ಕಳಪೆ ಫಲಿತಾಂಶಕ್ಕಾಗಿ ಆತ್ಮಹತ್ಯೆ ಸಂಖ್ಯೆಯು 1998ರಲ್ಲಿ ಶೇ. 41ರಷ್ಟಿದ್ದು, 2018ರಲ್ಲಿ ಶೇ. 26ರಷ್ಟಾಗಿರುವುದು ಅಂದರೆ ಕಡಿಮೆ ಯಾಗಿರುವುದು ಉತ್ತಮ ಬೆಳವಣಿಗೆ. 2014ರಿಂದ 2018ರ ವೇಳೆಗೆ ನಾಲ್ಕು ವಿದ್ಯಾರ್ಥಿಗಳಿಗೊಬ್ಬ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಮಹಾರಾಷ್ಟ್ರ ಅಥವಾ ತಮಿಳುನಾಡಿನಲ್ಲಿ ಎಂಬುದು ಗಮನಿಸಬೇಕಾದ ಸಂಗತಿ. ಈ ಅವಧಿಯಲ್ಲಿ ಅತೀ ಹೆಚ್ಚು ಅಂದರೆ ಮಹಾರಾಷ್ಟ್ರ(6,656), ತಮಿಳುನಾಡು(4,552), ಮಧ್ಯಪ್ರದೇಶ(3,928), ಪಶ್ಚಿಮ ಬಂಗಾಳ(3,920), ಕರ್ನಾಟಕ(3,164), ತೆಲಂಗಾಣ(2,125), ಕೇರಳ(1,917) ಮತ್ತು ಆಂಧ್ರಪ್ರದೇಶ(1,740)ದಲ್ಲಿ ಕಂಡು ಬಂದಿದೆ.

ಕರ್ನಾಟಕ ಮಾನಸಿಕ ಆರೋಗ್ಯದ ವರದಿ ಪ್ರಕಾರ ಕರ್ನಾಟಕದಲ್ಲಿ 2018-19ನೇ ಸಾಲಿನಲ್ಲಿ 18 ಲಕ್ಷ ಜನರು ಮಾನಸಿಕ ಅಸ್ವಸ್ಥತೆಗೆ ಒಳಗಾಗಿ ದ್ದಾರೆ. ಅತೀ ಹೆಚ್ಚು ಮಾನಸಿಕ ಅಸ್ವಸ್ಥತೆಗೆ ಒಳಗಾಗಿರುವ ಜಿಲ್ಲೆಗಳೆಂದರೆ ರಾಯಚೂರು(ಶೇ. 17.7), ಬೀದರ್(ಶೇ. 9.3), ಚಿಕ್ಕಬಳ್ಳಾಪುರ(ಶೇ.7.7) ಮತ್ತು ಬೆಂಗಳೂರು ನಗರ (ಶೇ. 7.5) ಹಾಗೂ ಅತೀ ಕಡಿಮೆ ಜಿಲ್ಲೆಗಳೆಂದರೆ ವಿಜಯಪುರ(ಶೇ. 0.6), ಯಾದಗಿರಿ(ಶೇ. 0.7) ಮತ್ತು ಕೊಡಗು(ಶೇ. 0.8)

ಫಲಿತಾಂಶವೇ ಅಂತಿಮವಲ್ಲ ಪರೀಕ್ಷೆಯಿಂದಾಚೆಗೂ ಹಲವಾರು ದಾರಿಗಳಿವೆ ಎಂಬುದನ್ನು ಅರಿತುಕೊಂಡು ಮುನ್ನಡೆಯಬೇಕಿದೆ. ಈ ನಿಟ್ಟಿನಲ್ಲಿ ಸಾಗಿದಾಗ ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನು ಸೃಷ್ಟಿಸಬಹುದು. ಪ್ರಸ್ತುತ ಪಿಯುಸಿ ಪರೀಕ್ಷೆಗಳು ನಡೆಯುತ್ತಿದ್ದು ಮತ್ತು ಎಸೆಸೆಲ್ಸಿ ಪರೀಕ್ಷೆಗಳು ನಡೆಯುವ ಹಂತದಲ್ಲಿದ್ದು, ಫಲಿತಾಂಶ ಬಂದ ನಂತರ ಯಾವುದೇ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಒಳಗಾಗದೆ ಆತ್ಮಸ್ಥೈರ್ಯದಿಂದ ಮುನ್ನಡೆಯಲಿ ಎಂದು ಹಾರೈಸೋಣ ಹಾಗೂ ನಮ್ಮ ಮಕ್ಕಳನ್ನು ಕಾಪಾಡುವ ಜವಾಬ್ದಾರಿಯನ್ನು ನಾವೆಲ್ಲರೂ ತೆಗೆದುಕೊಳ್ಳೋಣ.

Writer - ಡಾ. ಜಗನ್ನಾಥ ಕೆ. ಡಾಂಗೆ

contributor

Editor - ಡಾ. ಜಗನ್ನಾಥ ಕೆ. ಡಾಂಗೆ

contributor

Similar News