ಪ್ರಮುಖ ನಗರಗಳಲ್ಲಿ ಬಂಡವಾಳ ಹೂಡಿಕೆ ಸಮಾವೇಶ: ಸಚಿವ ಜಗದೀಶ್ ಶೆಟ್ಟರ್

Update: 2020-03-13 18:29 GMT

ಬೆಂಗಳೂರು, ಮಾ.13: ರಾಜ್ಯ ವ್ಯಾಪ್ತಿಯ ಪ್ರಮುಖ ನಗರಗಳಲ್ಲೂ ಹುಬ್ಬಳಿ ಮಾದರಿಯಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿ ಕೈಗಾರಿಕೋದ್ಯಮಿಗಳನ್ನು ಆಕರ್ಷಿಸಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಶುಕ್ರವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಎನ್.ಎ.ಹಾರೀಸ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ಬಂಡವಾಳ ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಿದ್ದು, 51 ಕೈಗಾರಿಕೆಗಳು ಸ್ಥಾಪನೆಯಾಗುವ ವಿಶ್ವಾಸ ವ್ಯಕ್ತವಾಗಿದೆ ಎಂದರು.

ಇದೇ ರೀತಿ, ಮೈಸೂರು, ಮಂಗಳೂರು, ಗುಲ್ಬರ್ಗಾ ಸೇರಿದಂತೆ ರಾಜ್ಯ ಪ್ರಮುಖ ನಗರಗಳಲ್ಲೂ ಈ ರೀತಿಯ ಬಂಡವಾಳ ಹೂಡಿಕೆ ಸಮಾವೇಶಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದ ಅವರು, ಬೆಂಗಳೂರು ಹೊರತುಪಡಿಸಿ ಬೇರೆ ನಗರಗಳಲ್ಲಿ ಕೈಗಾರಿಕೆ ಸ್ಥಾಪಿಸುವವರಿಗೆ ತೆರಿಗೆ ರಿಯಾಯಿತಿ ನೀಡಿದಂತೆ ಹಲವು ಸವಲತ್ತುಗಳನ್ನು ನೀಡಲು ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಔಷಧಿ ಕಂಪೆನಿ: ಯಾದಗಿರಿಯ ಕಡಚೂರಿನಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದ್ದು, ಹೈದರಾಬಾದ್ ಮೂಲದ ಔಷಧಿ ಕಂಪೆನಿಗಳು ತಮ್ಮ ತಯಾರಿಕಾ ಘಟಕಗಳನ್ನು ಆರಂಭಿಸಲು ಮುಂದಾಗಿದೆ ಎಂದು ಮಾಹಿತಿ ನೀಡಿದರು.

ಬಂದರು ಪ್ರಗತಿ: ಸರಕಾರ ಉತ್ತರ ಕರ್ನಾಟಕದ ಕೈಗಾರಿಕೆಗಳಿಗೆ ಅನುಕೂಲ ಒದಗಿಸಲು ಕಾರವಾರ, ಬೇಲಿಕೇರಿ ಬಂದರುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇಲ್ಲಿನ ಬೇಲಿಕೇರಿ ಬಂದರು ಅಭಿವೃದ್ಧಿ ಬಗ್ಗೆ ಈಗಾಗಲೇ ಸಮಗ್ರ ಯೋಜನಾ ವರದಿಯನ್ನು ತಯಾರಿಸಿದ್ದು, ದಾವೂಸ್‌ಗೆ ಮುಖ್ಯಮಂತ್ರಿಗಳ ಜತೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೇಂದ್ರದ ಬಂದರು ಸಚಿವರ ಜತೆ ಈ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.

ಜತೆಗೆ ಅಂಕೋಲಾ ಹುಬ್ಬಳ್ಳಿ ರೈಲ್ವೆ ಮಾರ್ಗ ಅನುಷ್ಠಾನಕ್ಕೂ ಗಮನ ಹರಿಸಿದ್ದೇವೆ. ಬೆಂಗಳೂರು ಹೊರತುಪಡಿಸಿ ಉಳಿದ ನಗರಗಳಲ್ಲೂ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಕೊಟ್ಟಿದ್ದೇವೆ. ತುಮಿಳುನಾಡು, ಮುಂಬೈ, ಗುಜರಾತ್ ಮಾದರಿಯಲ್ಲೇ ರಾಜ್ಯದಲ್ಲೂ ಬೆಂಗಳೂರು ಹೊರತುಪಡಿಸಿ ಬೇರೆ ನಗರಗಳಲ್ಲೂ ಕೈಗಾರಿಕೆಗಳನ್ನು ಸ್ಥಾಪಿಸಲು ಉದ್ಯಮಿಗಳಿಗೆ ರಿಯಾಯಿತಿ ಸವಲತ್ತುಗಳನ್ನು ನೀಡಿದ್ದೇವೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News