ನನ್ನ ತಂದೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ: ಕೊರೋನ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಪುತ್ರನ ದೂರು
ಕಲಬುರಗಿ, ಮಾ.14: ಜಿಲ್ಲೆ ಹಾಗೂ ಹೈದ್ರಾಬಾದ್‌ನ ಹಲವು ಆಸ್ಪತ್ರೆಗಳಿಗೆ ಅಲೆದರೂ ಯಾರೂ ನನ್ನ ತಂದೆಯನ್ನು ದಾಖಲಿಸಿಕೊಳ್ಳಲಿಲ್ಲ. ವೈದ್ಯರು ಸೂಕ್ತ ಸಮಯಕ್ಕೆ ಸ್ಪಂದಿಸಿ ಅವರಿಗೆ ಚಿಕಿತ್ಸೆ ನೀಡಿದ್ದರೆ ಅವರು ಬದುಕುಳಿಯುತಿದ್ದರು. ಇದಕ್ಕೆಲ್ಲ ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ದೇಶದಲ್ಲಿ ಮೊದಲು ಕೊರೋನ ಸೋಂಕಿಗೆ ಬಲಿಯಾಗಿದ್ದ ಜಿಲ್ಲೆಯ ಮುಹಮ್ಮದ್ ಹುಸೇನ್ ಸಿದ್ದಿಕಿ (76) ಅವರ ಪುತ್ರ ದೂರಿದ್ದಾರೆ.
ಇಲ್ಲಿನ ಎಂಎಸ್‌ಕೆ ಮಿಲ್ ಬಡಾವಣೆ ನಿವಾಸಿ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತಿದ್ದು, ದೇಶದಲ್ಲಿ ಮೊದಲು ಕೊರೋನ ಸೋಂಕಿನಿಂದ ಮೃತಪಟ್ಟ 76 ವರ್ಷದ ವೃದ್ಧನ ಮಗ, ತನ್ನ ತಂದೆ ಸಾಯುವ ಮುನ್ನ ನಡೆದ ಘಟನೆಗಳನ್ನು ವಿವರಿಸಿದ್ದಾರೆ.
ಉಮ್ರಾ ಯಾತ್ರೆಗೆಂದು ಸೌದಿ ಅರೇಬಿಯಾಗೆ ಹೋಗಿದ್ದ ತಂದೆ ಫೆ.29ರಂದು ಮನೆಗೆ ಮರಳಿದ್ದರು. ನಾಲ್ಕೈದು ದಿನಗಳ ನಂತರ ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಯಿತು. ಮಾ.8ರಂದು ಮಧ್ಯರಾತ್ರಿ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತು. ಮರುದಿನ ಬೆಳಗ್ಗೆ ವೈದ್ಯರೊಬ್ಬರನ್ನು ಮನೆಗೆ ಕರೆಸಿ ತಪಾಸಣೆ ಮಾಡಲಾಯಿತು. ನಂತರ ಅವರು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು.
ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿ ಅವರನ್ನು ದಾಖಲಿಸಿಕೊಳ್ಳದೆ ಬೆಡ್ ಖಾಲಿ ಇಲ್ಲ ಎಂದು ಕಳುಹಿಸಿದರು. ನಂತರ ಮತ್ತೆ ಎರಡು ಆಸ್ಪತ್ರೆಗಳಿಗೆ ಹೋದರೂ ಯಾರೊಬ್ಬರೂ ದಾಖಲಿಸಿಕೊಳ್ಳಲಿಲ್ಲ. ಕೊನೆಗೆ ಒಂದು ಖಾಸಗಿ ಆಸ್ಪತ್ರೆಯವರು ದಾಖಲಿಸಿಕೊಂಡರು. ಆದರೆ, ಅವರೂ ಕೆಲ ಹೊತ್ತಿನ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್‌ಗೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದರು. ಅಲ್ಲದೇ, ಆಗ ಜಿಲ್ಲಾಸ್ಪತ್ರೆಯಲ್ಲಿ ಕೊರೋನ ಸೋಂಕು ಪತ್ತೆಗಾಗಿ ಪ್ರತ್ಯೇಕ ವಾರ್ಡ್ ಸ್ಥಾಪಿಸಿರುವದನ್ನು ಯಾರೂ ನಮಗೆ ಹೇಳಲಿಲ್ಲ. ಹೀಗಾಗಿ, ನಾವು ಮಾ.10ರಂದು ಬೆಳಗ್ಗೆ ಹೈದ್ರಾಬಾದ್‌ಗೆ ಕರೆದುಕೊಂಡು ಹೋದೆವು. ಅಲ್ಲಿಯೂ ಮೂರರಿಂದ ನಾಲ್ಕು ಆಸ್ಪತ್ರೆಗಳಲ್ಲಿ ತಂದೆಗೆ ಚಿಕಿತ್ಸೆ ನೀಡುವಂತೆ ಕೇಳಿಕೊಂಡರು ಯಾವ ಆಸ್ಪತ್ರೆಯವರು ದಾಖಲಿಸಿಕೊಳ್ಳಲಿಲ್ಲ. ನಂತರ ಅವರನ್ನು ಮರಳಿ ಹೈದ್ರಾಬಾದಿನಿಂದ ಕಲಬರಗಿಗೆ ಕರೆದುಕೊಂಡು ಬರುವಾಗ ಮಾರ್ಗ ಮಧ್ಯ(ಕರ್ನಾಟಕ ಗಡಿ ಭಾಗಕ್ಕೆ) ಬಂದಾಗ ಮೃತಪಟ್ಟರು. ನಂತರ ಆರೋಗ್ಯ ಇಲಾಖೆಯ ಅಧಿಕಾರಿಗಳು ಮೃತದೇಹವನ್ನು ವಶಕ್ಕೆ ಪಡೆದು ಜಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಬಂದರು ಎಂದು ತಿಳಿಸಿದ್ದಾರೆ.
ಮೃತನ ಮನೆಯ 5 ಕಿ.ಮಿ ಪ್ರದೇಶ ಬಫರ್ ಝೋನ್...
ಕೊರೋನ ವೈರಸ್‌ನಿಂದ ಮೃತನಾದ ಹುಸೇನ್ ಸಿದ್ದಿಕಿ(76) ವಾಸಿಸುತಿದ್ದ ನಗರದ ವಾರ್ಡ್ ಸಂಖ್ಯೆ-30ರ ಸುತ್ತಮುತ್ತ 5 ಕಿ.ಮೀ ಪ್ರದೇಶವನ್ನು ಬಫರ್‌ಝೋನ್ ಎಂದು ಗುರುತಿಸಿ, ಸೋಂಕಿನ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಹಾಗೂ ಸಂಭವನೀಯ ಪರಿಸ್ಥಿತಿ ಎದುರಿಸಲು ನಗರದ ಇಎಸ್‌ಐ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಸಿದ್ಧಪಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.