ಕೇಂದ್ರ ತುರ್ತು ಬಜೆಟ್ ಮಂಡಿಸಲಿ: ಸಿದ್ದರಾಮಯ್ಯ

Update: 2020-03-14 13:10 GMT

ಬೆಂಗಳೂರು, ಮಾ.14: ಕೊರೋನ ವೈರಸ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗಿ ಬೆಳಕಿಗೆ ಬರುತ್ತಿರುವ ಹಿನ್ನೆಲೆ ಕೇಂದ್ರ ಸರಕಾರವು ತುರ್ತು ಬಜೆಟ್ ಮಂಡಿಸುವ ಮೂಲಕ ರಾಜ್ಯಗಳಿಗೆ ಆರ್ಥಿಕ ಸಹಾಯ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶನಿವಾರ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕಾ ರಾಷ್ಟ್ರವು ಕೊರೋನ ಭೀತಿ ಸಂಬಂಧ ಬಜೆಟ್ ಮಂಡನೆ ಮಾಡಿದೆ. ಇದೇ ಮಾದರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಬಜೆಟ್ ಮಂಡಿಸಬೇಕು. ಇದರಿಂದ ರಾಜ್ಯ ಸರಕಾರಗಳಿಗೆ ಸಹಾಯ ಆಗಲಿದೆ ಎಂದು ನುಡಿದರು.

ಇನ್ನು ರಾಜ್ಯದಲ್ಲಿ ಕೊರೋನ ಸೋಂಕು ಕಾಣಿಸಿಕೊಂಡು ವಾರ ಕಳೆದಿದೆ. ಐದು ಮಂದಿಗೆ ರೋಗ ದೃಢಪಟ್ಟಿದೆ. ರಕ್ತ ಮಾದರಿ ಪರೀಕ್ಷೆಗೆ ರಾಜ್ಯದಲ್ಲಿರುವುದೇ 5 ಪ್ರಯೋಗಾಲಯಗಳು, ಜಿಲ್ಲಾ ಕೇಂದ್ರಗಳಲ್ಲಿ ಪ್ರಯೋಗಾಲಯ ವ್ಯವಸ್ಥೆ ಇಲ್ಲ. ವಿಮಾನ ನಿಲ್ದಾಣವಿರುವ ಜಿಲ್ಲಾ ಕೇಂದ್ರಗಳಲ್ಲಿಯೂ ಇಲ್ಲ. ಜೀವನ್ಮರಣದ ಪ್ರಶ್ನೆಯಾಗಿರುವ ಕೊರೋನ ವಿಚಾರದಲ್ಲಿ ಅಸಡ್ಡೆ ಬೇಡ ಎಂದರು.

ಸದ್ಯ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ರಕ್ತ ಮಾದರಿ ಪರೀಕ್ಷೆಗೆ ಪ್ರಯೋಗಾಲಯ ತೆರೆಯಲು ಸರಕಾರ ತಕ್ಷಣ ಕ್ರಮಕೈಗೊಳ್ಳಬೇಕು. ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಜನರ ಆರೋಗ್ಯದ ಮಾಹಿತಿ ಪಡೆಯಬೇಕು. ರಾಜ್ಯದ ಜನ ರೋಗದ ಬಗ್ಗೆ ಗಾಬರಿಗೊಂಡಿದ್ದು, ಸರಕಾರ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News