ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಶಂಕಿತ ವ್ಯಕ್ತಿಯಲ್ಲಿ ಕೊರೋನಾ ಇಲ್ಲ
ಚಿಕ್ಕಮಗಳೂರು, ಮಾ.14: ನಗರದ ಜಿಲ್ಲಾಸ್ಪತ್ರೆಗೆ ಕಳೆದ ಗುರುವಾರ ದಾಖಲಾಗಿದ್ದ ಕೊರೋನಾ ವೈರಸ್ ಸೋಂಕು ಶಂಕಿತ ವ್ಯಕ್ತಿಯ ವೈದ್ಯಕೀಯ ತಪಾಸಣೆ ವರದಿ ನೆಗೆಟಿವ್ ಬಂದಿದ್ದು, ಕಾಫಿನಾಡಿನ ಜನರು ನಿಟ್ಟುಸಿರು ಬಿಡುವಂತಾಗಿದೆ.
ಗುರುವಾರ ನಗರದ ಜಿಲ್ಲಾಸ್ಪತ್ರೆಗೆ ಮೂಡಿಗೆರೆಯಿಂದ ಜ್ವರದ ತಪಾಸಣೆಗೆ ಬಂದಿದ್ದ ವ್ಯಕ್ತಿಯೊಬ್ಬರ ಕಫವನ್ನು ಕರೋನಾ ವೈರಸ್ ಶಂಕೆಯ ಹಿನ್ನೆಲೆಯಲ್ಲಿ ಪರೀಕ್ಷೆಗೆ ಹಾಸನಕ್ಕೆ ಕಳಿಸಲಾಗಿತ್ತು. ಶುಕ್ರವಾರ ರಾತ್ರಿ 10ಕ್ಕೆ ವ್ಯಕ್ತಿಯ ಪರೀಕ್ಷಾ ವರದಿ ಹೊರಬಿದ್ದಿದ್ದು, ಶಂಕಿತ ವ್ಯಕ್ತಿಗೆ ಕೊರೋನಾ ವೈರಸ್ ಸೋಂಕು ತಗುಲಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರು ಮೂಲದ ವ್ಯಕ್ತಿ ಕಳೆದ 15 ದಿನಗಳ ಹಿಂದೆ ಕುವೈತ್‍ಗೆ ಭೇಟಿ ನೀಡಿ ಮಂಗಳೂರಿಗೆ ವಾಪಸ್ ಆಗಿದ್ದರು. ಕಳೆದ ಎರಡು ದಿನಗಳ ಹಿಂದೆ ಮೂಡಿಗೆರೆ ತಾಲೂಕಿನ ಕಣಚೂರು ಗ್ರಾಮದಲ್ಲಿರುವ ಸಹೋದರಿ ಮನೆಗೆ ಬಂದಿದ್ದರು.ಅವರಿಗೆ ಬುಧವಾರ ಶೀತ, ಜ್ವರ ಕಾಣಿಸಿಕೊಂಡಿದ್ದು ಮೂಡಿಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಒಳಗಾಗಿದ್ದರು. ಬಳಿಕ ವ್ಯಕ್ತಿಯ ಹಿನ್ನೆಲೆ ವಿಚಾರಿಸಿ ಕುವೈತ್‍ನಿಂದ ಹಿಂದುರುಗಿದರ ಬಗ್ಗೆ ಮಾಹಿತಿ ಪಡೆದ ನಂತರ ಮೂಡಿಗೆರೆ ವೈದ್ಯರು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ಶಿಫಾರಸ್ಸು ಮಾಡಿದ್ದರು.
ಕೊರೋನಾ ವೈರಸ್ ಶಂಕಿತ ವ್ಯಕ್ತಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಂತೆ ಕಾಡ್ಗಿಚಿನಂತೆ ಹರಡಿದ್ದ ಸುದ್ದಿಯಿಂದ ಕಾಫಿನಾಡಿನ ಜನರು ಆತಂಕಕ್ಕೆ ಈಡಾಗಿದ್ದು, ಶುಕ್ರವಾರ ರಾತ್ರಿ ಹೊರಬಿದ್ದ ವರದಿಯಿಂದ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ.