ಕೊರೋನಾ ಸೋಂಕು ವದಂತಿ ಹಬ್ಬಿಸಿದ ರಾಜ್ಯದ ಇಬ್ಬರ ಬಂಧನ
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದ ಯುವಕನ ಫೋಟೋ ಬಳಸಿಕೊಂಡು ಕೊರೋನ ಸೋಂಕು ತಗುಲಿರುವ ಬಗ್ಗೆ ಟಿವಿಯಲ್ಲಿ ಸುದ್ದಿ ಬಿತ್ತರವಾಗಿರುವ ಹಾಗೆ ಎಡಿಟ್ ಮಾಡಿ ಸಾಮಾಜಿಕ ಜಾಲಾತಾಣದಲ್ಲಿ ಹರಿ ಬಿಟ್ಟು ಜನರಲ್ಲಿ ಆತಂಕ ಮೂಡಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ ತಾಲ್ಲೂಕಿನ ಕಾವುದವಾಡಿ ಗ್ರಾಮದ ಲೋಕೇಶ್ ಮತ್ತು ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ನೀಲಕಂಠೇಶ್ವರ ಬಡಾವಣೆಯ ನಾಗೇಂದ್ರ ಎಂಬವರು ಬಂಧಿತರು.
ಬಂಧಿತರು ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಸುದ್ದಿ ಬಿತ್ತರವಾಗಿರುವಂತೆ ಎಡಿಟ್ ಮಾಡಿ ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದ ಯುವಕ ಮತ್ತು ನಂಜನಗೂಡಿನ ಯುವತಿಗೆ ಕೊರನಾ ವೈರಸ್ ಸೋಂಕು ತಗುಲಿದ ಬಗ್ಗೆ ವಾಟ್ಸ್ ಆಪ್ ಗ್ರೂಪ್ ಗಳಿಗೆ ಹರಿ ಬಿಟ್ಟರು. ಇವರು ಹರಿ ಬಿಟ್ಟ ನಕಲಿ ಪೋಸ್ಟ್ ಗಳಿಂದ ಗ್ರಾಮಾಂತರ ಜನತೆ ಆತಂಕಗೊಂಡಿದ್ದರು. ಈ ಬಗ್ಗೆ ಗುಂಡ್ಲುಪೇಟೆ ತಾಲೂಕಿನ ಶಿಂಡನಪುರ ಗ್ರಾಮದ ಯುವಕರು ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡಿ ಆರೋಪಿಗಳನ್ನು ಬಂಧಿಸುವಂತೆ ಮನವಿ ಮಾಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ವೈರಸ್ ಗಡಿ ಚಾಮರಾಜನಗರ ಜಿಲ್ಲೆಗೆ ತಗುಲಿದೆ ಎನ್ನುವ ವದಂತಿಯ ಬಗ್ಗೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಗಂಭೀರವಾಗಿ ಪರಿಗಣಿಸಿ, ಸುಳ್ಳು ವದಂತಿ ಹರಡಿದ ವ್ಯಕ್ತಿಗಳ ಪತ್ತೆ ಹಾಗೂ ಬಂಧನಕ್ಕೆ ಸೂಚಿಸಿದರು. ಆ ಬಳಿಕ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರವಿ ಪೊಲೀಸ್ ಇಲಾಖೆಗೆ ದೂರು ನೀಡಿದ ಹಿನ್ನಲೆಯಲ್ಲಿ ಪಟ್ಟಣ ಪೊಲೀಸ್ ಇನ್ಸ್ ಪೆಕ್ಟರ್ ನಾಗೇಗೌಡ ನೇತೃತ್ವದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ವೈರಸ್ ಬಗ್ಗೆ ಸುಳ್ಳು ವದಂತಿ ಹರಿ ಬಿಟ್ಟ ಕಾವುದವಾಡಿ ಲೋಕೇಶ್ ಹಾಗೂ ನಂಜನಗೂಡು ನಾಗೇಂದ್ರನನ್ನು ಬಂಧಿಸಿ ನ್ಯಾಯಾದೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾದೀಶರು ಬಂಧಿತರನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದರು.