ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್; ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಶಸ್ತಿ

Update: 2020-03-14 14:25 GMT

ಹುಬ್ಬಳ್ಳಿ, ಮಾ.14: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್ ಅಡಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಉತ್ತಮ ವಿಮಾನ ನಿಲ್ದಾಣ ಪ್ರಶಸ್ತಿ ನೀಡಿ ಗೌರವಿಸಿದೆ.

ಕೇಂದ್ರ ಸರಕಾರದ ವಿಮಾನಯಾನ ಮಂತ್ರಾಲಯವು, ಭಾರತೀಯ ವಾಣಿಜ್ಯೋದ್ಯಮ ಸಂಸ್ಥೆಯ ಸಹಯೋಗದಲ್ಲಿ ಹೈದರಾಬಾದ್‌ನ ಬೇಗಂಪೇಟೆಯಲ್ಲಿ ಮಾ.12 ರಿಂದ 15 ರವರೆಗೆ ಆಯೋಜಿಸಿರುವ ಏಷ್ಯಾದ ಅತಿದೊಡ್ಡ ವಿಮಾನಯಾನ ಕುರಿತ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ್ ಠಾಕ್ರೆ ಪ್ರಶಸ್ತಿ ಸ್ವೀಕರಿಸಿದರು.

ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್ ಎರಡನೆ ಹಂತದ ಯೋಜನೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿವಿಧ ನಾಲ್ಕು ವಿಮಾನ ಸಂಸ್ಥೆಗಳಿಂದ 9 ಮಾರ್ಗಗಳನ್ನು ನೀಡಲಾಗಿದೆ. ಈ ಹಿಂದೆ ನೀಡಲಾಗಿದ್ದ ಎಲ್ಲ 8 ಮಾರ್ಗಗಳನ್ನು ಈ ನಿಲ್ದಾಣ ಸಮರ್ಥವಾಗಿ ನಿರ್ವಹಿಸಿದೆ. ಪ್ರತಿವರ್ಷ ಉತ್ತಮ ಪ್ರಗತಿ ಹೊಂದುತ್ತಿದೆ.

2017-18 ಹಾಗೂ 2018-19ರ ಅವಧಿಯಲ್ಲಿ ವಿಮಾನ ಸಂಚಾರ ಬೆಳವಣಿಗೆಯು ಶೇ.500 ರಷ್ಟು ಹಾಗೂ ಪ್ರಯಾಣಿಕರ ಓಡಾಟ ಶೇ.800ರಷ್ಟು ವೃದ್ಧಿಯಾಗಿದೆ. 4.6 ಲಕ್ಷ ಪ್ರಯಾಣಿಕರಿಗೆ ಒಟ್ಟು 6694 ನಿರ್ಧಾರಿತ ಸಂಚಾರಗಳಲ್ಲಿ ಶೇ.85 ರಷ್ಟು ಸೇವೆ ನೀಡಲಾಗಿದೆ.

ನಿರಂತರ ಪ್ರಯತ್ನದ ಪರಿಣಾಮವಾಗಿ 2019-20ನೆ ಸಾಲಿನಲ್ಲಿ ಕಳೆದ ಜನವರಿ ಅಂತ್ಯದವರೆಗೆ 4.11 ಲಕ್ಷ ಜನರಿಗೆ ಸೇವೆ ನೀಡಲಾಗಿದೆ. ಈ ಆರ್ಥಿಕ ವರ್ಷಾಂತ್ಯಕ್ಕೆ 5 ಲಕ್ಷ ಜನರನ್ನು ತಲುಪುವ ನಿರೀಕ್ಷೆ ಇದೆ. ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿಯೂ ಕ್ರಮ ಕೈಗೊಳ್ಳಲಾಗಿದೆ.

ಈ ಪ್ರಶಸ್ತಿ ದೊರೆಯಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಆಡಳಿತ ಮಂಡಳಿ, ಕರ್ನಾಟಕ ಸರಕಾರ, ಜಿಲ್ಲಾಡಳಿತ ಹಾಗೂ ಭಾಗೀದಾರರು ನೀಡಿದ ಸಹಕಾರವೂ ಕಾರಣವಾಗಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಠಾಕ್ರೆ ಪ್ರಶಸ್ತಿ ಸ್ವೀಕರಿಸಿದ ಬಳಿಕ ಸಂತಸ ಹಂಚಿಕೊಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News