ರಾಜ್ಯದಲ್ಲಿ ಆರು ಕೊರೋನ ವೈರಸ್ ಪ್ರಕರಣ ದೃಢ
ಬೆಂಗಳೂರು, ಮಾ.14: ರಾಜ್ಯದಲ್ಲಿ ಈವರೆಗೆ ಒಟ್ಟು ಆರು ಕೋವಿಡ್-19(ಕೊರೋನ ವೈರಸ್) ಖಚಿತಪಟ್ಟ ಪ್ರಕರಣಗಳು ವರದಿಯಾಗಿವೆ. ಐದು ಖಚಿತಪಟ್ಟ ಪ್ರಕರಣಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟನೆ ಹೊರಡಿಸಿದೆ.
ಕೊರೋನ ಬಾಧಿತ ದೇಶಗಳಿಂದ ಬರುವ ಪ್ರಯಾಣಿಕರು ಯಾವುದೇ ಲಕ್ಷಣಗಳಿಲ್ಲದಿದ್ದರೂ 14 ದಿನಗಳವರೆಗೆ ಕಡ್ಡಾಯವಾಗಿ ಮನೆಯಲ್ಲೆ ಪ್ರತ್ಯೇಕವಾಗಿರಬೇಕು. ಖಚಿತಪಟ್ಟ ಪ್ರಕರಣಗಳಲ್ಲಿ ಸಂಪರ್ಕಕ್ಕೆ ಬಂದಿರುವವರು ಅಥವಾ ಹೆಚ್ಚಿನ ಗಂಡಾಂತರವಿರುವ ದೇಶಗಳಿಂದ ಬಂದಿರುವವರನ್ನು ಆರೋಗ್ಯ ಕಾರ್ಯಕರ್ತರು ಅನುಸರಣೆ ಮಾಡುತ್ತಾರೆ.
ಕೊರೋನ ಬಾಧಿತ ಇತರೆ ದೇಶಗಳಿಂದ ಬರುವ ಪ್ರಯಾಣಿಕರನ್ನು 104 ಸಹಾಯವಾಣಿಯಿಂದ ಕರೆ ಮಾಡಿ ಅನುಸರಣೆ ಮಾಡಲಾಗುವುದು. ಕೊರೋನ ಬಾಧಿತ ಯಾವುದೆ ದೇಶಗಳಿಂದ ಕಳೆದ 14 ದಿನಗಳ ಹಿಂದೆ ಭೇಟಿ ಮಾಡಿ ಬಂದ ರೋಗ ಲಕ್ಷಣಗಳಿರುವ ಪ್ರಯಾಣಿಕರು ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕತಾ ವಾರ್ಡ್‌ಗಳಿಗೆ ದಾಖಲಾಗಿ ಕೋವಿಡ್-19ಗೆ ಪರೀಕ್ಷೆಗೆ ಒಳಪಡತಕ್ಕದ್ದು. ವೈದ್ಯಕೀಯ ಮಹಾವಿದ್ಯಾಲಯಗಳ ಸಿಬ್ಬಂದಿಗಳಿಗೆ ಒಂದು ತರಬೇತಿ ಕಾರ್ಯಕ್ರಮವನ್ನು ನಡೆಸಲಾಗಿದೆ. ಮಾ.13ರಿಂದ ಭಾರತ ಸರಕಾರದ ಸೂಚನೆಗಳಂತೆ 7 ದೇಶಗಳ ಪ್ರಯಾಣಿಕರನ್ನು ಗಂಡಾಂತರದ ವರ್ಗದ ಅಡಿಯಲ್ಲಿ (ಚೀನಾ, ಇಟಲಿ, ಇರಾನ್, ಕೊರಿಯಾ, ಫ್ರಾನ್ಸ್, ಸ್ಪೇನ್ ಮತ್ತು ಜರ್ಮನಿ) ಪ್ರತ್ಯೇಕವಾಗಿರಿಸುವ ಕ್ರಮ ಕೈಗೊಳ್ಳಲಾಗಿದೆ.
ಗಂಡಾಂತರ ವರ್ಗದಡಿಯಲ್ಲಿ ಬರುವ ಎಲ್ಲ ಪ್ರಯಾಣಿಕರು(ಆಗಮಿಸಿದಾಗ ರೋಗ ಲಕ್ಷಣ ಇರುವವರು) ಮತ್ತು ವರ್ಗ-2(60 ವರ್ಷ ವಯಸ್ಸಿಗಿಂತ ಹೆಚ್ಚಿರುವವರು)ಗಳನ್ನು ಭಾರತಕ್ಕೆ ಆಗಮಿಸಿದ 14 ದಿನಗಳವರೆಗೆ ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.