ಸರಕಾರದ ಆದೇಶದ ಹಿನ್ನೆಲೆಯಲ್ಲಿ ಸರಳವಾಗಿ ಮಗಳ ವಿವಾಹ ಆಚರಿಸಲು ಶಾಸಕ ರಾಜೇಗೌಡ ತೀರ್ಮಾನ

Update: 2020-03-14 15:15 GMT
ಶಾಸಕ ರಾಜೇಗೌಡ ಮಗಳು ಸಂಜನಾ ಹಾಗೂ ಅಳಿಯ ವಚನ್

►ಚಿಕ್ಕಮಗಳೂರಿನ ಒಕ್ಕಲಿಗರ ಭವನದಲ್ಲಿ ನಿಗದಿಯಾಗಿದ್ದ ಅದ್ದೂರಿ ಮದುವೆ ಸಮಾರಂಭ ರದ್ದು

ಚಿಕ್ಕಮಗಳೂರು, ಮಾ.14: ಕೊರೋನಾ ವೈರಸ್ ಭೀತಿ ಇದೀಗ ಮದುವೆ ಮನೆಗಳಿಗೂ ತಟ್ಟಿದ್ದು, ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರ ಮಗಳ ವಿವಾಹ ಸಮಾರಂಭಕ್ಕೂ ಕೊರೋನಾ ಬಿಸಿ ಮುಟ್ಟಿಸಿದೆ.

ಕೊರೋನಾ ವೈರಸ್ ಸೋಂಕು ಹರಡುವ ಆತಂಕದಿಂದಾಗಿ ರಾಜ್ಯ ಸರಕಾರ ಮದುವೆ ಮತ್ತಿತರ ಜನರು ಸೇರುವ ಕಾರ್ಯಕ್ರಮಗಳನ್ನು ಮುಂದೂಡಿರುವ ಹಿನ್ನೆಲೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರು ಮಾ.19ಕ್ಕೆ ನಿಗದಿಯಾಗಿದ್ದ ತಮ್ಮ ಮಗಳ ವಿವಾಹವನ್ನು ಸರಳವಾಗಿ ನೆರವೇರಿಸಲು ನಿರ್ಧರಿಸಿದ್ದಾರೆ.

ಈ ಸಂಬಂಧ ಶನಿವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ತನ್ನ ಮಗಳು ಡಾ.ಸಂಜನಾ ಹಾಗೂ ಕಾಫಿ ಬೆಳೆಗಾರ ಅತ್ತಿಕಟ್ಟೆ ಜಗನ್ನಾಥ್ ಅವರ ಮಗ ವಚನ್ ಲಕ್ಷ್ಮಣ್ ಅವರ ವಿವಾಹ ಸಮಾರಂಭ ಮಾ.19ರಂದು ನಿಶ್ಚಯವಾಗಿದ್ದು, ಅಂದು ಚಿಕ್ಕಮಗಳೂರು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ವಿವಾಹ ಕಾರ್ಯಕ್ರಮ ನಡೆಸಲು ವಧು ಹಾಗೂ ವರನ ಕಡೆಯವರು ತೀರ್ಮಾನಿಸಿದ್ದೆವು. ವಿವಾಹ ಕಾರ್ಯಕ್ರಮಕ್ಕೆ ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಹೊಂದಿದ್ದು, ಈ ಸಂಬಂಧ ಈಗಾಗಲೇ ಆಹ್ವಾನ ಪತ್ರಿಕೆಗಳನ್ನೂ ಹಂಚಲಾಗಿತ್ತು ಎಂದು ಅವರು ತಿಳಿಸಿದರು.

ಆದರೆ ರಾಜ್ಯ ಸರಕಾರ ಕೊರೋನಾ ವೈರಸ್ ಸೋಂಕಿನ ಭೀತಿಯಿಂದಾಗಿ ಮದುವೆ, ಜಾತ್ರೆ, ಸಭೆ, ಸಮಾರಂಭಗಳಂತಹ ಹೆಚ್ಚು ಜನ ಸೇರುವ ಕಾರ್ಯಕ್ರಮಗಳನ್ನು ಒಂದು ವಾರದ ಮಟ್ಟಿಗೆ ಮುಂದೂಡುವಂತೆ ಈಗಾಗಲೇ  ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಮಾ.19ರಂದು ನಿಗದಿಯಾಗಿದ್ದ ವಿವಾಹ ಕಾರ್ಯಕ್ರಮವನ್ನು ಚಿಕ್ಕಮಗಳೂರು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಸದಿರಲು ತೀರ್ಮಾನಿಸಲಾಗಿದೆ. ಇದರ ಬದಲಿಗೆ ನಿಗದಿತ ದಿನಾಂಕದಂದು ಖಾಂಡ್ಯಾ ಹೋಬಳಿಯಲ್ಲಿರುವ ತನ್ನ ಮಾಲಕತ್ವದ ಬಾಸಾಪುರ ಎಸ್ಟೇಟ್‍ನಲ್ಲಿ ಮಾ.18ರಂದು ಬುಧವಾರ ವಿವಾಹದ ದೇವತಾಕಾರ್ಯ ಹಾಗೂ ಮಾ.19ರಂದು ಗುರುವಾರ ವಿವಾಹ ಕಾರ್ಯಕ್ರಮವನ್ನು ವಧು ಹಾಗೂ ವರನ ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಮಾಹಿತಿ ನೀಡಿದರು.

ಮಾ.21ರಂದು ವರನ ತಂದೆ ಅತ್ತಿಕಟ್ಟೆ ಜಗನ್ನಾಥ್ ಅವರು ಚಿಕ್ಕಮಗಳೂರು ಕ್ಲಬ್‍ನಲ್ಲಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಿದ್ದು, ಸರಕಾರದ ಆದೇಶದ ಹಿನ್ನೆಲೆಯಲ್ಲಿ ಆರಕ್ಷತೆ ಕಾರ್ಯಕ್ರಮವನ್ನೂ ಮುಂದೂಡಲಾಗಿದೆ ಎಂದು ತಿಳಿಸಿದ ಅವರು, ವಿವಾಹ ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಇತ್ತು. ಆದರೆ ಮಾರಕ ರೋಗದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕಾಗಿರುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದ್ದು, ತನ್ನ ಸಂಬಂಧಿಗಳು ಹಾಗೂ ಆಪ್ತರು, ಹಿತೈಷಿಗಳು ಇರುವಲ್ಲಿಂದಲೇ ವಧು ವರರದನ್ನು ಆಶೀರ್ವದಿಸಬೇಕೆಂದು ಶಾಸಕ ರಾಜೇಗೌಡ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ವರನ ತಂದೆ ಹಾಗೂ ಕಾಫಿ ಬೆಳೆಗಾರ ಅತ್ತಿಕಟ್ಟೆ ಜಗನ್ನಾಥ್, ಶಾಸಕ ರಾಜೇಗೌಡ ಅವರ ಆಪ್ತರಾದ ಎಸ್.ವಿ.ಮಂಜುನಾಥ್, ಶ್ರೀಧರ್, ಮಲ್ಲೇಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News