×
Ad

ಪತ್ರಕರ್ತೆ ಹೆಸರಿನಲ್ಲಿ ಅಧಿಕಾರಿಗಳಿಂದ ಹಣ ವಸೂಲಿ ಆರೋಪ: ಎಸಿಬಿಗೆ ದೂರು, ಕ್ರಮಕ್ಕೆ ಒತ್ತಾಯ

Update: 2020-03-14 20:44 IST

ಬೆಂಗಳೂರು, ಮಾ.14: ನನ್ನ ಹೆಸರು ದುರ್ಬಳಕೆ ಮಾಡಿಕೊಂಡು ಕೆಲ ಸರಕಾರಿ ಅಧಿಕಾರಿಗಳು ಹಣ ವಸೂಲಿ ಮಾಡಿದ್ದಾರೆಂದು ಆರೋಪಿಸಿ ಹಿರಿಯ ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು, ಎಸಿಬಿಗೆ ದೂರು ಸಲ್ಲಿಸಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಾದ ಶಶಿಕುಮಾರ್ ಹಾಗೂ ದಿನೇಶ್ ಎಂಬುವರು ಆರ್ಟ್ ಆಫ್ ಲಿವಿಂಗ್ ಸಂಸ್ಥೆ ವಿರುದ್ಧದ ಒಂದು ತನಿಖಾ ವರದಿಯನ್ನು ದುರ್ಬಳಕೆ ಮಾಡಿಕೊಂಡು, ಹಣ ವಸೂಲಿ ಮಾಡಿದ್ದಾರೆ. ಈ ಸಂಬಂಧ ದಾಖಲೆಗಳಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿಜಯಲಕ್ಷ್ಮೀ ಶಿಬರೂರು ಒತ್ತಾಯಿಸಿದ್ದಾರೆ.

ದೂರಿನಲ್ಲಿ ಏನಿದೆ?: ನಾನು 2018ನೇ ಸಾಲಿನಿಂದ ನ್ಯೂಸ್ 18 ಕನ್ನಡ ಸುದ್ದಿ ವಾಹಿನಿಯ ಬೆಂಗಳೂರು ಬ್ಯುರೋ ಸಂಪಾದಕಿ ಆಗಿ ಕಾರ್ಯ ನಿರ್ವಹಿಸುತ್ತಿದ್ದೆ. ಆದರೆ, 2019 ಸೆಪ್ಟೆಂಬರ್‌ನಲ್ಲಿ ಸಂಸ್ಥೆ ನನಗೆ ಏಕಾಏಕಿಯಾಗಿ, ಯಾವುದೇ ಕಾರಣ ನೀಡದೆ ಹುದ್ದೆಯಿಂದ ವಜಾಗೊಳಿಸಿತು. ಇದು ನನ್ನನ್ನು ಭಾರೀ ಘಾಸಿಗೊಳಿಸಿದ್ದಲ್ಲದೆ, ನನ್ನಲ್ಲಿ ಅಚ್ಚರಿಯೂ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.

ಇಲ್ಲಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಆಶ್ರಮದೊಳಗೆ ಉತ್ಪತ್ತಿ ಆಗುತ್ತಿರುವ ಪ್ಲಾಸ್ಟಿಕ್ ಸಹಿತ ತ್ಯಾಜ್ಯವನ್ನು ಕೆರೆಗೆ ಸುರಿಯುತ್ತಿರುವ ಸಂಬಂಧ ಆಗಸ್ಟ್‌ನಲ್ಲಿ ವಿಶೇಷ ತನಿಖಾ ವರದಿಯೊಂದನ್ನು ನ್ಯೂಸ್ 18 ಕನ್ನಡ ಸುದ್ದಿ ವಾಹಿನಿಯಲ್ಲಿ ಪ್ರಸಾರ ಮಾಡಲಾಗಿತ್ತು. ಆದರೆ, ಇದನ್ನೇ ಆಧಾರವಾಗಿಟ್ಟುಕೊಂಡು ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಾದ ಶಶಿಕುಮಾರ್ ಹಾಗೂ ದಿನೇಶ್ ಎಂಬುವರು ಸುದ್ದಿ ವಾಹಿನಿಯ ಸಹದ್ಯೋಗಿಗಳ ಸಹಾಯ ಪಡೆದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಿ, ತದನಂತರ ದಂಡ ವಿಧಿಸಿದ್ದಾರೆ.
ಅಷ್ಟೇ ಅಲ್ಲದೆ, ಈ ಸುದ್ದಿ ಮತ್ತೆ ಪ್ರಸಾರವಾಗದಂತೆ ನೋಡಿಕೊಳ್ಳಲು ನ್ಯೂಸ್ 18 ವಾಹಿನಿಗೆ ಹಣ ನೀಡಬೇಕೆಂದು ಬೇಡಿಕೆಯಿಟ್ಟು, ಬರೋಬ್ಬರಿ 25 ಲಕ್ಷ ರೂ. ವಸೂಲಿ ಮಾಡಿದ್ದಲ್ಲದೆ, ನನ್ನನ್ನು ಸಂಸ್ಥೆಯಿಂದ ವಜಾಗೊಳಿಸುತ್ತೇವೆ ಎಂದೂ ಹೇಳಿದ್ದಾರೆ. ಇದೆಲ್ಲಾ ನನ್ನ ಸ್ನೇಹಿತರೊಬ್ಬರ ಮೊಬೈಲ್‌ನಲ್ಲಿ ಆಡಿಯೊ ಸೆರೆಯಾಗಿದೆ. ಈ ಸಂಬಂಧ ಎಸಿಬಿ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ, ಸತ್ಯಾಸತ್ಯತೆ ಬಯಲಿಗೆಳೆಯಬೇಕೆಂದು ದೂರಿನಲ್ಲಿ ವಿಜಯಲಕ್ಷ್ಮೀ ಶಿಬರೂರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News