ಕೊರೋನ ಸೋಂಕು ಪಸರಿಸದಂತೆ ಸರಕಾರ ಕಡಿವಾಣ ಹಾಕಬೇಕು: ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು, ಮಾ.14: ಕಲಬುರಗಿಯಲ್ಲಿ ಕೊರೋನ ಸೋಂಕು ಪಸರಿಸದಂತೆ ಸರಕಾರ ಕಡಿವಾಣ ಹಾಕಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿಯಲ್ಲಿ ಕೊರೋನಗೆ ದೇಶದ ಮೊದಲ ವ್ಯಕ್ತಿ ಬಲಿಯಾಗಿದ್ದು ದುರ್ದೈವ. ಆದರೆ, ಸರಕಾರ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಆ ವ್ಯಕ್ತಿಯಲ್ಲಿ ಕೊರೋನ ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿದರು.
ದೆಹಲಿಯಿಂದಲೇ ನಾನು ಸಹ ಜಿಲ್ಲಾಧಿಕಾರಿಗಳಿಂದ ಕಲಬುರಗಿ ವ್ಯಕ್ತಿಯ ಸಾವು ಕುರಿತು ಮಾಹಿತಿ ಪಡೆದೆ. ಎಲ್ಲ ಸುರಕ್ಷತಾ ಕ್ರಮಗಳನ್ನೂ ತೆಗೆದುಕೊಂಡಿರುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದರು. ಆದರೆ, ಸೌದಿಯಿಂದ ಬಂದ ವ್ಯಕ್ತಿಗೆ ವಯಸ್ಸಾಗಿತ್ತು. ತಪಾಸಣೆ ವೇಳೆ ಕೊರೋನ ಇರುವ ಬಗ್ಗೆ ಗೊತ್ತಾಗಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು.
ಆದರೆ, ಕೊರೋನದಿಂದಲೇ ಕಲಬುರಗಿ ವ್ಯಕ್ತಿ ಸಾವನ್ನಪ್ಪಿದ ಬಳಿಕ ಇನ್ನು ಮುಂದಾದರೂ ಸೂಕ್ತ ಸುರಕ್ಷತಾ ಕ್ರಮಗಳನ್ನು ಕಲಬುರಗಿಯಲ್ಲಿ ಕೈಗೊಳ್ಳಬೇಕಿದೆ. ಕೊರೋನ ಹಬ್ಬದಂತೆ ಸರಕಾರ ಹೆಚ್ಚಿನ ಗಮನ ಕೊಡಬೇಕು. ಕಲಬುರಗಿ ವ್ಯಕ್ತಿಯ ಸಾವು ವಿಚಾರದಲ್ಲಿ ಯಾಕೆ ಹೀಗಾಯಿತು ಎಂಬುದನ್ನು ಸರಕಾರ ಪರಿಶೀಲನೆ ಮಾಡಬೇಕಿದೆ ಎಂದು ತಿಳಿಸಿದರು.
ಸೌದಿಯಿಂದ ವ್ಯಕ್ತಿ ಬಂದ ಮೇಲೆ ನೂರಾರು ಜನರನ್ನು ಭೇಟಿ ಮಾಡಿದ್ದಾರೆ. ಅವರೆಲ್ಲರ ತಪಾಸಣೆ ನಡೆಸಬೇಕಿದೆ. ಸರಕಾರ ಮತ್ತು ಅಧಿಕಾರಿಗಳು ಇಬ್ಬರೂ ಎಚ್ಚರದಲ್ಲಿ ಕೆಲಸ ಮಾಡಬೇಕು. ಕೊರೋನ ವೈರಸ್ ಎಲ್ಲೆಡೆ ಹಬ್ಬುತ್ತಿದೆ. ಪಕ್ಷದ ವತಿಯಿಂದ ಕೊರೋನ ಬಗ್ಗೆಯೂ ಜನಜಾಗೃತಿ ಮಾಡುತ್ತೇವೆ ಎಂದು ತಿಳಿಸಿದರು.