ಧಾರವಾಡ ಜಿಲ್ಲೆಯಲ್ಲಿ ಕೊರೋನ ಪ್ರಕರಣ ಇಲ್ಲ: ಜಿಲ್ಲಾಧಿಕಾರಿ ಸ್ಪಷ್ಟಣೆ

Update: 2020-03-14 17:31 GMT

ಧಾರವಾಡ, ಮಾ.14: ಜಿಲ್ಲೆಯಲ್ಲಿ ಇದುವರೆಗೆ ಕೊರೋನ ಪ್ರಕರಣಗಳು ಪತ್ತೆಯಾಗಿಲ್ಲ. ಸಾರ್ವಜನಿಕರು ಅನಗತ್ಯವಾಗಿ ಭಯಭೀತರಾಗಬಾರದು. ಶಾಲಾ, ಕಾಲೇಜು, ಶಿಕ್ಷಣ ತರಬೇತಿ ಸಂಸ್ಥೆಗಳು, ಈಜುಕೊಳ ಮತ್ತಿತರ ಸಾರ್ವಜನಿಕ ಸ್ಥಳಗಳಿಗೆ ಈಗಾಗಲೆ ಒಂದು ವಾರ ರಜೆ ನೀಡಲಾಗಿದೆ. ಜಿಲ್ಲೆಯ ಆಯ್ದ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯಕೀಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಮಾಧ್ಯಮಗಳಿಗೆ ಮನವಿ: ವೃತ್ತಪತ್ರಿಕೆ, ಟಿವಿಗಳು ಸೇರಿದಂತೆ ಯಾವುದೆ ಸಾಮಾಜಿಕ ಜಾಲತಾಣಗಳು ವದಂತಿಗಳಿಗೆ ಅವಕಾಶ ನೀಡಬಾರದು. ಜಿಲ್ಲಾಡಳಿತದ ಮೂಲಕ ಜಿಲ್ಲಾಧಿಕಾರಿಗಳಿಂದ ಮಾತ್ರ ಅಧಿಕೃತ ಪ್ರಕಟಣೆಗಳನ್ನು ಹೊರಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮವಾಗಿ ಕೈಗಳನ್ನು ಸಾಬೂನಿನಿಂದ ಪದೇ ಪದೇ ತೊಳೆದುಕೊಳ್ಳಬೇಕು. ಕಣ್ಣು, ಮೂಗು, ಬಾಯಿ, ಕಿವಿಗಳ ಇಂದ್ರಿಯಗಳನ್ನು ಅನಗತ್ಯವಾಗಿ ಸ್ಪರ್ಶಿಸಬಾರದು. ಸೋಂಕಿತ ವ್ಯಕ್ತಿಗಳ ಸಂಪರ್ಕಕ್ಕೆ ಬಾರದಂತೆ ಎಚ್ಚರವಹಿಸಬೇಕು ಎಂದು ದೀಪಾ ಚೋಳನ್ ಸಲಹೆ ನೀಡಿದ್ದಾರೆ.

ಜಾತ್ರೆ, ಉತ್ಸವ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಹೆಚ್ಚು ಜನ ಸೇರುವ ಸಾಧ್ಯತೆ ಇರುತ್ತದೆ. ಮುಂಜಾಗ್ರತಾ ಕ್ರಮವಾಗಿ ಇಂತಹ ಜನದಟ್ಟಣೆ ಇರುವ ಪ್ರದೇಶಗಳಿಂದ ಸ್ವಯಂ ಪ್ರೇರಣೆಯಿಂದ ಸಾಧ್ಯವಾದಷ್ಟು ದೂರವಿರಲು ಮತ್ತು ಇಂತಹ ಕಾರ್ಯಕ್ರಮಗಳನ್ನು ಮುಂದೂಡಲು ವಿನಂತಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹುಬ್ಬಳ್ಳಿ-ಧಾರವಾಡದ ಪ್ರಮುಖ ಹೊಟೇಲ್‌ಗಳಲ್ಲಿ ತಂಗುವ ರೋಗದ ಲಕ್ಷಣಗಳಿರುವ ಶಂಕಿತ ಪ್ರವಾಸಿಗರನ್ನು ಎಚ್ಚರಿಕೆಯಿಂದ ಸರಕಾರದ ನಿರ್ದೇಶನ ಹಾಗೂ ಮಾರ್ಗದರ್ಶಿ ಸೂಚನೆಗಳಂತೆ ತಪಾಸಣೆಗೆ ಒಳಪಡಿಸಲು ಹೊಟೇಲ್ ಮಾಲಕರಿಗೆ ಸೂಚನೆ ನೀಡಬೇಕು ಎಂದು ದೀಪಾ ಚೋಳನ್ ತಿಳಿಸಿದ್ದಾರೆ.

ಅಂತಹ ಸಂದರ್ಭಗಳಲ್ಲಿ ಕೂಡಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಡಿಎಚ್‌ಓ ಅವರ ಮೊಬೈಲ್ ಸಂಖ್ಯೆ: 94498 43049, ಜಿಲ್ಲಾ ಸಮೀಕ್ಷಣಾಧಿಕಾರಿಗಳ ಮೊಬೈಲ್ ಸಂಖ್ಯೆ: 94498 43254 ಗೆ ಸಂಪರ್ಕಿಸಿ ಮಾಹಿತಿ ನೀಡಬೇಕು. ಅಥವಾ 104 ಸಹಾಯವಾಣಿಗೆ ಸಂಪರ್ಕಿಸಬಹುದು ಎಂದು ಅವರು ಹೇಳಿದ್ದಾರೆ.

ಕೊರೋನ ವೈರಸ್ ಪತ್ತೆಗೆ ಖಾಸಗಿ ಪ್ರಯೋಗಾಲಯಗಳು ಪರೀಕ್ಷೆ ನಡೆಸಿ ವರದಿ ನೀಡಲು ಅವಕಾಶವಿಲ್ಲ. ಸರಕಾರ ಗುರುತಿಸಿರುವ ಆಯ್ದ 5 ಪ್ರಯೋಗಾಲಯಗಳ ವರದಿಗಳು ಮಾತ್ರ ದೃಢಪಡಿಸುತ್ತವೆ. ರೋಗ ಲಕ್ಷಣಗಳುಳ್ಳ ಯಾವುದೇ ವ್ಯಕ್ತಿಗಳು ಕಂಡು ಬಂದರೆ ಕೂಡಲೆ ಜಿಲ್ಲಾಡಳಿತ ಅಥವಾ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ 104 ಗೆ ಮಾಹಿತಿ ನೀಡಬಹುದು ಎಂದು ದೀಪಾ ಚೋಳನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News