ಕಾನೂನು ಪದವೀಧರರು ಅಧ್ಯಯನಶೀಲತೆ ರೂಢಿಸಿಕೊಳ್ಳಬೇಕು: ನ್ಯಾ.ಮೋಹನ ಶಾಂತನಗೌಡರ್

Update: 2020-03-14 17:35 GMT

ಧಾರವಾಡ, ಮಾ.14: ಕಾನೂನು ಪದವಿ ಪಡೆದ ಪದವೀಧರರಿಗೆ ಮುಂದೆ ಏನು ಮಾಡಬೇಕು ಎಂಬ ಪ್ರಶ್ನೆ ಮೂಡುವುದು ಸಹಜ. ಆದುದರಿಂದ, ಪದವಿ ಪಡೆದ ಕ್ಷಣದಿಂದಲೇ ತಮ್ಮ ಮುಂದಿನ ಭವಿಷ್ಯವನ್ನು ಕಟ್ಟಿಕೊಳ್ಳಲು ಆರಂಭಿಸಬೇಕು. ನಿರಂತರ ಪ್ರಯತ್ನ, ಅಧ್ಯಯನ ಶೀಲತೆ ಮೈಗೂಡಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮೋಹನ ಶಾಂತನಗೌಡರ್ ಕರೆ ನೀಡಿದರು.

ಶನಿವಾರ ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ ನಡೆದ ರಾಜ್ಯ ಕಾನೂನು ವಿಶ್ವವಿದ್ಯಾಲಯದ ನಾಲ್ಕನೆ ವಾರ್ಷಿಕ ಘಟಿಕೋತ್ಸವ ಉದ್ದೇಶಿಸಿ ಅವರು ಮಾತನಾಡಿದರು.

ತಾವು ಓದುತ್ತಿದ್ದ ಅವಧಿಯಲ್ಲಿ ಈ ತರಹದ ಘಟಿಕೋತ್ಸವ ನಡೆಯುತ್ತಿರಲಿಲ್ಲ. ಆದರೆ, ಇಂದು ಘಟಿಕೋತ್ಸವ ಮಾಡುವ ಮೂಲಕ ಪದವೀಧರರನ್ನು ಪ್ರೋತ್ಸಾಹಿಸಲಾಗುತ್ತಿದೆ. ಕಾನೂನು ಓದುತ್ತಿರುವ ವಿದ್ಯಾರ್ಥಿಗಳು ಕೋರ್ಟ್‌ಗಳಲ್ಲಿ ತರಬೇತಿ ಪಡೆದುಕೊಳ್ಳುವ ಮೂಲಕ ಹೆಚ್ಚಿನ ಜ್ಞಾನವನ್ನು ಹೊಂದಬಹುದು ಎಂದು ಅವರು ಹೇಳಿದರು.

ನ್ಯಾಯಾಲಯದ ನ್ಯಾಯಮೂರ್ತಿಗಳು ಕಾನೂನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವುದರೊಂದಿಗೆ ಅವರನ್ನು ಪ್ರೋತ್ಸಾಹಿಸಬೇಕು . ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಲೋಕಮಾನ್ಯ ಬಾಲಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್ ಸೇರಿದಂತೆ ಮುಂತಾದವರು ಕಾನೂನು ಪದವಿ ಪಡೆದು, ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಶ್ರಮಿಸಿದ್ದಾರೆ ಎಂದು ಮೋಹನ ಶಾಂತನಗೌಡರ್ ತಿಳಿಸಿದರು.

ಕಾನೂನು ಪದವಿ ಪಡೆಯುತ್ತಿರುವವರು ಮೊದಲು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರಿಕೆಟ್, ವ್ಯಾಯಾಮ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಸಚಿವರಿಂದ ಚಾಲನೆ: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗೂ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಜೆ.ಸಿ.ಮಾಧುಸ್ವಾಮಿ ಘಟಿಕೋತ್ಸವಕ್ಕೆ ಚಾಲನೆ ನೀಡಿದರು. ಒಟ್ಟು 5136 ಅಭ್ಯರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿಗಳನ್ನು ಪ್ರದಾನ ಮಾಡಲಾಯಿತು.

ಘಟಿಕೋತ್ಸವದಲ್ಲಿ ಕುಲಪತಿ ಪ್ರೊ.ಡಾ.ಪಿ.ಭಟ್, ಕುಲ ಸಚಿವ ಮೇಜರ್ ಸಿದ್ದಲಿಂಗಯ್ಯ ಎಸ್.ಹಿರೇಮಠ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News