ಎಸ್ಸೆಸ್ಸೆಲ್ಸಿ ಮಕ್ಕಳು ಮನೆಯಲ್ಲೇ ಅಭ್ಯಾಸ ಮುಂದುವರೆಸಿ: ಕೆ.ರತ್ನಯ್ಯ

Update: 2020-03-14 17:47 GMT

ಕೋಲಾರ: ಕೊರೋನಾ ವೈರಸ್ ಭೀತಿ ಹಿನ್ನಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮನೆಗಳಲ್ಲೇ ಕುಳಿತು ಅಭ್ಯಾಸ ಮಾಡಬೇಕಿರುವುದರಿಂದ ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರ ಮಾರ್ಗದರ್ಶನದ ಜತೆಗೆ, ಪೋಷಕರು ತಮ್ಮ ಮಕ್ಕಳ ಅಭ್ಯಾಸದ ಕಡೆ ಗಮನಹರಿಸಬೇಕು ಎಂದು ಡಿಡಿಪಿಐ ಕೆ.ರತ್ನಯ್ಯ ಮನವಿ ಮಾಡಿದ್ದಾರೆ. 

ಈ ಕುರಿತು ಹೇಳಿಕೆ ನೀಡಿರುವ ಅವರು, ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಶಾಲೆಗಳಲ್ಲಿ ತರಗತಿಯ ಜತೆಗೆ ಶಾಲೆಗೆ ಮುನ್ನಾ ಮತ್ತು ನಂತರದ ಅವಧಿಯಲ್ಲಿ ವಿಶೇಷ ತರಗತಿಗಳನ್ನು ಶಿಕ್ಷಕರು ನಡೆಸುತ್ತಿದ್ದರು.

ಜಿಲ್ಲೆಗೆ ಗುಣಾತ್ಮಕ ಫಲಿತಾಂಶ ತಂದುಕೊಡುತ್ತಿರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತಾದರೂ, ಇದೀಗ ಮಾರಕ ಕೊರೋನಾ ಭೀತಿಯಿಂದಾಗಿ ಮುಂಜಾಗ್ರತೆ ವಹಿಸಲು ಇಲಾಖೆ ತಿಳಿಸಿರುವುದರಿಂದ ಮನೆಗಳಲ್ಲೇ ಅಭ್ಯಾಸ ಮುಂದುವರೆಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಡಿಡಿಪಿಐ ಕಿವಿಮಾತು
ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ ಅಭ್ಯಾಸ ಮಾಡಿ, ಶಿಕ್ಷಕರು ನೀಡಿರುವ ಮಾರ್ಗದರ್ಶನ ಪಾಲಿಸಿ, ಇಲಾಖೆ ನೀಡಿರುವ ಆರು ಸೆಟ್ ಪ್ರಶ್ನೆಪತ್ರಿಕೆ, `ನನ್ನನ್ನೊಮ್ಮೆ ಗಮನಿಸಿ' ಮಾದರಿ ಪ್ರಶ್ನೆಪತ್ರಿಕೆ `ಚಿತ್ರಮಿತ್ರ' ಅಭ್ಯಾಸ ಮಾಡಿ, ವ್ಯಾಕರಣಾಂಶಗಳು, ಛಂದಸ್ಸು, ಭೂಪಟ ರಚನೆ, ಸ್ಥಳ ಗುರುತಿಸುವಿಕೆ, ಗಣಿತದಲ್ಲಿ ಲೆಕ್ಕಗಳು, ಸೂತ್ರಗಳು,ಪ್ರಮೇಯಗಳು, ವಿಜ್ಞಾನ ಚಿತ್ರಗಳ ಅಭ್ಯಾಸ ಮಾಡಿ ಎಂದು ಸಲಹೆ ನೀಡಿದ್ದಾರೆ. 

ಇಲಾಖೆ ನೀಡಿರುವ ಪ್ರಶ್ನೆಪತ್ರಿಕೆಗಳಿಗೆ ಮಕ್ಕಳು ಜೋರಾಗಿ ಹೇಳಿಕೊಂಡು ಉತ್ತರ ಬರೆಯಿರಿ, ಮನನ ಮಾಡಿಕೊಂಡು ಕಲಿತಿದ್ದನ್ನು ದೃಢಪಡಿಸಿಕೊಳ್ಳಿ, ಶಿಕ್ಷಕರ ಉಸ್ತುವಾರಿ ಇಲ್ಲ ಎಂದು ಭಾವಿಸಿ ಓದದೇ ಕಾಲಹರಣ ಮಾಡಿ ನಿಮ್ಮ ಬದುಕಿನಲ್ಲಿ ಸೋಲನ್ನು ಅನುಭವಿಸದಿರಿ ಎಂದು ತಿಳಿಸಿದ್ದಾರೆ.

7,8,9ನೇ ತರಗತಿ ಪರೀಕ್ಷೆ ಮುಗಿಸಿ
ಮಾರಕ ಕೊರೋನಾ ವೈರಸ್ ತಡೆಗೆ ಶಾಲೆಗಳಲ್ಲಿ ಸ್ವಚ್ಚತೆಗೆ ಎಚ್ಚರವಹಿಸಿ ಹಾಗೂ 8 ಮತ್ತು 9ನೇ ತರಗತಿ ಪರೀಕ್ಷೆಗಳನ್ನು ಶಿಕ್ಷಣ ಇಲಾಖೆ ಆಯುಕ್ತರ ನಿರ್ದೇಶನದಂತೆ ಮಾ.23 ರೊಳಗೆ ಒಂದೇ ಅವಧಿಯಲ್ಲಿ ಮುಗಿಸಿ ಡಿಸಿಪಿಐ ಸೂಚನೆ ನೀಡಿದ್ದಾರೆ.

ಈ ಹಿಂದೆ ಪರೀಕ್ಷೆಗಳನ್ನು ಎರಡು ಅವಧಿಯಲ್ಲಿ ಇಡೀ ದಿನ ನಡೆಸಲು ಸೂಚಿಸಲಾಗಿತ್ತು ಆದರೆ ಕೊರೋನಾ ಭೀತಿ ಹಿನ್ನಲೆಯಲ್ಲಿ ಒಂದೇ ಅವಧಿಯಲ್ಲಿ ಲಿಖಿತ ಹಾಗೂ ಮೌಖಿಕ ಪರೀಕ್ಷೆ ಮುಗಿಸಿ ಮಕ್ಕಳನ್ನು ಕಳುಹಿಸಿಕೊಡಿ ಎಂದು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. 

ಮಕ್ಕಳಿಗೆ ಮಾತ್ರವೇ ಶಾಲೆಗೆ ರಜೆ ನೀಡಿದ್ದು, ಶಿಕ್ಷಕರು ಶಾಲೆಗಳಲ್ಲಿ ಹಾಜರಿದ್ದು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿ ಅಂಕಗಳನ್ನು ಕ್ರೋಢೀಕೃತ ಹಾಗೂ ವೈಯುಕ್ತಿಕ ವಹಿಗಳಲ್ಲಿ ದಾಖಲಿಸುವ ಕೆಲಸ ಮಾಡಿ ಎಂದು ಸೂಚಿಸಿದ್ದಾರೆ.

ಆರೋಗ್ಯ ರಕ್ಷಣೆಗೆ ಡಿಡಿಪಿಐ ಸಲಹೆ
ಮಕ್ಕಳು ವೈಯುಕ್ತಿಕ ಸ್ವಚ್ಚತೆಗೆ ಗಮನಹರಿಸಿ, ಎಲ್ಲೆಂದರಲ್ಲಿ ಸಿಕ್ಕ ಆಹಾರ ಖರೀದಿಸಿ ಸೇವಿಸದಿರಿ, ಪರೀಕ್ಷೆ ಮುಗಿಯುವರೆಗೂ ಎಣ್ಣೆಯಿಂದ ಕರಿದ ತಿಂಡಿ ತಿನ್ನದಿರಿ, ಕೈಗಳನ್ನು ಚೆನ್ನಾಗಿ ತೊಳೆದುಕೊಂಡು ಊಟ ಮಾಡಿ ಎಂದು ತಿಳಿಸಿದ್ದಾರೆ.

ಕೊರೋನಾ ಬಗ್ಗೆ ಮಕ್ಕಳಲ್ಲಿ ಆತಂಕ ಬೇಡ, ನೀವು ಮನೆಯಲ್ಲೇ ಕುಳಿತು ಅಭ್ಯಾಸ ಮಾಡಿ ಆರೋಗ್ಯ ರಕ್ಷಣೆ ಮಾಡಿಕೊಂಡು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಶ್ರಮಿಸಿ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News