‘ಕೊರೋನಾ ವೈರಸ್’ ಎದುರಿಸಲು ಸರಕಾರ ಸನ್ನದ್ಧ: ಮುಖ್ಯಮಂತ್ರಿ ಯಡಿಯೂರಪ್ಪ
ಬೆಳಗಾವಿ, ಮಾ. 15: ಕೊರೋನಾ ವೈರಸ್ ಸೋಂಕನ್ನು ಎದುರಿಸಲು ರಾಜ್ಯ ಸರಕಾರ ಸರ್ವ ಸನ್ನದ್ಧವಾಗಿದೆ. ರಾಜ್ಯದ ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ರವಿವಾರ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ನೂರಕ್ಕೂ ಮೇಲ್ಪಟ್ಟ ಕೊರೋನಾ ವೈರಸ್ ಸೋಂಕು ಶಂಕಿತರ ಮೇಲೆ ನಿಗಾ ವಹಿಸಲಾಗಿದೆ. ರಾಜ್ಯ ಸರಕಾರ ಕೊರೋನಾ ಸೊಂಕು ಎದುರಿಸಲು ಅಗತ್ಯ ಮುನ್ನಚ್ಚರಿಕೆ ಕೈಗೊಂಡಿದೆ ಎಂದರು.
ಮುನ್ನಚ್ಚರಿಕೆ: ಕೊರೋನಾ ವೈರಸ್ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಒಂದು ವಾರ ಕಾಲ ಶಾಲಾ-ಕಾಲೇಜು, ಮದುವೆ, ಸಭೆ-ಸಮಾರಂಭ ಸೇರಿದಂತೆ ಎಲ್ಲ ಕಾರ್ಯಕ್ರಮಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದ ಅವರು ವಿವರ ನೀಡಿದರು.
ರಾಜ್ಯದಲ್ಲಿ ಈವರೆಗೆ ಆರು ಜನರಿಗೆ ಕೊರೋನಾ ವೈರಸ್ ಸೋಂಕಿ ಇರುವುದು ದೃಢಪಟ್ಟಿದೆ. ಅಲ್ಲದೆ, ಸೋಂಕಿನ ಶಂಕಿತರ ಮೇಲೆಯೂ ಸರಕಾರ ಸೂಕ್ತ ನಿಗಾ ಇರಿಸಿದೆ ಎಂದ ಅವರು, ಕೊರೋನಾ ತಡೆಗೆ ಆರೋಗ್ಯ, ಶಿಕ್ಷಣ, ಕಂದಾಯ, ಪೊಲೀಸ್ ಇಲಾಖೆ ಒಳಗೊಂಡು ಸಮನ್ವಯತೆಯಿಂದ ಕೆಲಸ ಮಾಡಲಾಗುತ್ತಿದೆ ಎಂದರು.
ವಿದೇಶಿಯರ ತಪಾಸಣೆ: ‘ಕೊರೋನಾ ವೈರಸ್ ಸೋಂಕು ನಿಯಂತ್ರಣಕ್ಕೆ ಗೃಹ ಇಲಾಖೆ ಮಹತ್ವದ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಆಗಮಿಸುವ ವಿದೇಶಿ ಪ್ರಯಾಣಿಕರ ತಪಾಸಣೆ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಖಾಸಗಿ ವಾಹನದಲ್ಲಿ ರಾಜ್ಯಕ್ಕೆ ಆಗಮಿಸುವವರನ್ನೂ ತಪಾಸಣೆ ಮಾಡುವಂತೆ ಆದೇಶ ನೀಡಲಾಗಿದೆ. ಈ ವಿಚಾರದಲ್ಲಿ ಜನರ ಸಹಕಾರ ಹಾಗೂ ಇಲಾಖೆಗಳ ಸಹಭಾಗಿತ್ವ ಉತ್ತಮವಾಗಿದೆ. ಕೊರೊನಾ ವೈರಸ್ ಹರಡಿದ್ದು, ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ನೀಡಲಾಗಿದೆ ಎಂದರು.