×
Ad

ಕೊಡಗಿನಲ್ಲಿ ಕೊರೋನಾ ನಿಗಾ: ವಿದೇಶದಿಂದ ಮರಳಿದ ಮೂವರಿಗೆ ಸೋಂಕು ಶಂಕೆ

Update: 2020-03-15 20:07 IST
ಕೊರೋನ ಸೋಂಕು ಹರಡದಂತೆ ಜಿಲ್ಲೆಯಾದ್ಯಂತ ಜಾಗೃತಿ

ಮಡಿಕೇರಿ ಮಾ.15: ಕೊರೋನಾ ವೈರಸ್ ಹರಡದಂತೆ ಕರ್ನಾಟಕ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಹೊರಡಿಸಿರುವ ಆದೇಶಗಳನ್ನು ಕೊಡಗು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಡಳಿತ ಮುಂದಾಗಿದ್ದು, ಅದರಂತೆ ಜಿಲ್ಲೆಯಿಂದ ವಿದೇಶಗಳಿಗೆ ಹೋಗಿ ಹಿಂತಿರುಗಿ ಬಂದಿರುವವರನ್ನು ಪತ್ತೆ ಹಚ್ಚಿ ತಪಾಸಣೆ ಮಾಡುವ ಕಾರ್ಯವನ್ನು ಕೈಗೊಳ್ಳಲಾಗಿದೆ.

ರವಿವಾರ ಸಂಜೆಯವರೆಗೆ ವಿದೇಶದಿಂದ ಮರಳಿರುವ 77 ಮಂದಿಯನ್ನು ಪತ್ತೆ ಮಾಡಲಾಗಿದ್ದು, ಈ ಪೈಕಿ ಮೂರು ಮಂದಿಗೆ ಸೋಂಕು ತಗುಲಿರುವ ಶಂಕೆ ಇರುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ರವಿವಾರ ಸಂಜೆಯವರೆಗೆ ಮಡಿಕೇರಿ ತಾಲೂಕಿನಲ್ಲಿ 37, ವೀರಾಜಪೇಟೆ ತಾಲೂಕಿನಲ್ಲಿ 19 ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 21 ಜನರನ್ನು ಪತ್ತೆ ಹಚ್ಚಲಾಗಿದ್ದು, ಈ ಪೈಕಿ 74 ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಅವರವರ ಮನೆಗಳಲ್ಲಿಯೇ ಇರುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ. 

ವಿದೇಶದಿಂದ ಬಂದಿರುವ ಮೂರು ಮಂದಿಗೆ ಸೋಂಕು ತಗುಲಿರುವ ಶಂಕೆ ಇದ್ದು, ಅವರನ್ನು ಮತ್ತು ಇವರೊಂದಿಗೆ ಸೋಂಕಿನ ಶಂಕೆ ಇರುವ ವ್ಯಕ್ತಿಗಳ ಕುಟುಂಬದ 3 ಜನ ಸದಸ್ಯರೂ ಸೇರಿ ಒಟ್ಟು 6 ಮಂದಿಯನ್ನು ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿಟ್ಟು ನಿಗಾ ವಹಿಸಲಾಗಿದೆ. ಸೋಂಕು ತಗುಲಿರುವ ಶಂಕೆ ಇರುವ ಪ್ರಕರಣಗಳಲ್ಲಿ ಪರೀಕ್ಷಾ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜಾತ್ರೆ-ಸಂತೆ ರದ್ದು

ಜಿಲ್ಲೆಯಲ್ಲಿ ನಡೆಯಲಿರುವ ಹಲವಾರು ಜಾತ್ರೆ ಹಾಗೂ ಸಂತೆಗಳನ್ನು ರದ್ದುಪಡಿಸುವಂತೆ ಜಿಲ್ಲಾಡಳಿತ ನಿರ್ದೇಶನ ನೀಡಿದೆ. ಆದರೂ ಕೆಲವೆಡೆ ಪಂಚಾಯತ್ ಅಧಿಕಾರಿಗಳ ಹಾಗೂ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಸಂತೆಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರತ್ಯೇಕವಾಗಿ ನಿರ್ದೇಶನ ನೀಡಿರುವ ಜಿಲ್ಲಾಡಳಿತ, ಸಂತೆ ಇತ್ಯಾದಿ ಇರುವೆಡೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.

ಸಂತೆ ಇರುವೆಡೆ  ಹೆಚ್ಚು ಜನಸಂದಣಿಯಾಗದಂತೆ ನಿಗಾ ವಹಿಸುವುದು, ತೆರೆದಿಟ್ಟ ತಿಂಡಿ ತಿನಿಸು, ಕತ್ತರಿಸಿದ ಹಣ್ಣು ಇತ್ಯಾದಿ ಮಾರುವುದನ್ನು ಸಂಪೂರ್ಣ ನಿಷೇಧಿಸುವುದು, ಪಾನಿಪೂರಿ ಅಥವಾ ಇತರೆ ಫಾಸ್ಟ್ ಫುಡ್ ತಿನಿಸು ಮಾರುವುದನ್ನು ಸಂಪೂರ್ಣ ನಿಷೇಧಿಸುವಂತೆ ಸಲಹೆ ಮಾಡಿದೆ.

ತರಕಾರಿ ಸೇರಿದಂತೆ ಜನರಿಗೆ ಅಗತ್ಯವಾಗಿ ಬೇಕಾದ ಅವಶ್ಯ ವಸ್ತುಗಳನ್ನು ಒದಗಿಸಲು ಅನುವು ಮಾಡಿಕೊಡುವುದು, ತಟ್ಟೆ, ಲೋಟ, ಸ್ಪೂನ್ ಇತ್ಯಾದಿ ಬಳಸಿ ತಿನ್ನುವ ವಸ್ತುಗಳನ್ನು ಮಾರುವುದನ್ನು ಸಂಪೂರ್ಣ ನಿಷೇಧಿಸುವುದು, ಸಂತೆಯ ಅವಧಿಯನ್ನು ಸೀಮಿತಗೊಳಿಸುವುದು, ಸಂತೆಯಲ್ಲಿ ಗುಂಪಿನಲ್ಲಿ ತೆರಳುವುದನ್ನು ಸಂಪೂರ್ಣ ನಿಷೇಧಿಸುವುದು, ಆರೋಗ್ಯ ಇಲಾಖೆಯ ಮೊಬೈಲ್ ಯುನಿಟ್ ಸೌಲಭ್ಯ ಪಡೆಯುವುದು, ಈಗಾಗಲೇ  ವಿದೇಶ ಪ್ರಯಾಣ ಇತಿಹಾಸ ಹೊಂದಿರುವ ವ್ಯಕ್ತಿಗಳು ಕಡ್ಡಾಯವಾಗಿ ಮನೆಯಲ್ಲಿ ಇರುವಂತೆ ಹಾಗೂ ಸಂತೆಯಲ್ಲಿ ಭಾಗವಹಿಸದಂತೆ ಮುನ್ನೆಚ್ಚರಿಕೆ ವಹಿಸುವುದು, ಆಶಾ ಸಿಬ್ಬಂದಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಪಂಚಾಯತ್ ಸಿಬ್ಬಂದಿಗಳು ಅಗತ್ಯ ಸುರಕ್ಷಾ ಪರಿಕರಗಳೊಂದಿಗೆ ಮುಂಜಾಗ್ರತೆ ವಹಿಸುವುದು, ಸಂತೆ ಮುಗಿದ ತಕ್ಷಣ ಸ್ವಚ್ಚತಾ ಕಾರ್ಯ ಕೈಗೊಳ್ಳುವುದು, ಮಾಂಸ ಮಳಿಗೆಗಳಲ್ಲಿ ತೆರೆದಿಟ್ಟು ಮಾರುವುದನ್ನು ಸಂಪೂರ್ಣ ನಿಷೇಧಿಸುವುದು, ಗಾಜಿನ ಪೆಟ್ಟಿಗೆ ಅಥವಾ ಇತರೆ ಸುರಕ್ಷಾ ಕ್ರಮ ಅನುಸರಿಸುವುದು, ಸಂತೆಗೆ ಚಿಕ್ಕ ಮಕ್ಕಳನ್ನು ಕರೆತರದಂತೆ ಮಾಹಿತಿ ನೀಡುವುದು, ಸಂತೆಯಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ಸಾಂಕ್ರಾಮಿಕ ಕಾಯಿಲೆ ಹರಡದಂತೆ ವಹಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News