ದಕ್ಷಿಣ ಕೊಡಗಿನ ಸುಳುಗೋಡುವಿನಲ್ಲಿ ಹುಲಿ ಸೆರೆ
Update: 2020-03-15 20:15 IST
ಮಡಿಕೇರಿ,ಮಾ.15 : ದಕ್ಷಿಣ ಕೊಡಗಿನ ಬಾಳೆಲೆ ಹೋಬಳಿ ಸುಳುಗೋಡುವಿನಲ್ಲಿ ಹುಲಿ ಸೆರೆಯಾಗಿದ್ದು, ಸತತ ಆರು ಗಂಟೆಯ ಕಾರ್ಯಾಚರಣೆ ಯಶಸ್ವಿಯಾಗಿದೆ. ಹುಲಿಯು ಸುಮಾರು 8 ರಿಂದ 9 ವಯಸ್ಸು ಇರಬಹುದೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುಳುಗೋಡು ಗ್ರಾಮದ ಪಾಸುರ ಕಾಶಿ ಕಾರ್ಯಪ್ಪ ಎಂಬವರು ತಮ್ಮ ಹಸುವನ್ನು ತಮ್ಮ ಭತ್ತದ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದರು. ಹಸುವಿಗೆ ನೀರು ಕುಡಿಸಲು ತೆರಳಿದಾಗ ಹುಲಿಯೊಂದು ಕೆರೆಯಲ್ಲಿ ನೀರು ಕುಡಿಯುತ್ತಿತ್ತು. ಇದನ್ನು ಕಂಡ ಕಾಶಿಯವರು ಗಾಬರಿಗೊಂಡು ತಮ್ಮ ಹಸುವನ್ನು ಕೆರೆಯ ಏರಿಯಿಂದಲೇ ಕರೆದುಕೊಂಡು ವಾಪಾಸಾಗಿದ್ದಾರೆ.
ವಿಷಯ ತಿಳಿದ ತಿತಿಮತಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಎಸಿಎಫ್ ಶ್ರೀಪತಿ, ಅರ್.ಎಫ್.ಒ. ಅಶೋಕ್ ಹುನಗುಂದ ಸೇರಿದಂತೆ ಸಿಬ್ಬಂದಿಗಳ ತಂಡ ಸ್ಥಳಕ್ಕೆ ಆಗಮಿಸಿದರು. ಅರವಳಿಕೆ ಮದ್ದಿನ ಸಹಾಯದಿಂದ ಹುಲಿಯ ಪ್ರಜ್ಞೆ ತಪ್ಪಿಸಿ ಸೆರೆ ಹಿಡಿದು ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಯಿತು.
ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.