ಮಂಡ್ಯ: ರೈತರ ಒಡವೆ ಹರಾಜು ವಿರೋಧಿಸಿ ರೈತಸಂಘ ಪ್ರತಿಭಟನೆ

Update: 2020-03-15 17:24 GMT

ಮಂಡ್ಯ, ಮಾ.15: ಮದ್ದೂರು ಪಟ್ಟಣದ ಸಿಂಡಿಕೇಟ್ ಬ್ಯಾಂಕ್‍ನಲ್ಲಿ ರೈತರ ಒಡವೆಗಳನ್ನು ಬಹಿರಂಗ ಹರಾಜು ಮಾಡುತ್ತಿದ್ದಾರೆಂದು ಆರೋಪಿಸಿ ರೈತ ಸಂಘದ ವತಿಯಿಂದ ಬ್ಯಾಂಕ್ ಆವರಣದಲ್ಲಿ ರವಿವಾರ ಪ್ರತಿಭಟನೆ ಮಾಡಲಾಯಿತು.

ರೈತ ಸಂಘದ ಮುಖಂಡ ಗೊಲ್ಲರದೊಡ್ಡಿ ಅಶೋಕ್ ಮಾತನಾಡಿ, ಬ್ಯಾಂಕ್‍ನಲ್ಲಿ ಜಿಲ್ಲಾಧಿಕಾರಿಗಳ ಆದೇಶವಿಲ್ಲದೆ ರೈತರ ಒಡವೆಗಳನ್ನು ಬಹಿರಂಗ ಹರಾಜು ಮಾಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೋನಾ ಭೀತಿಯಲ್ಲಿ ಜನರು ಹೊರಗಡೆ ಬರಲು ಹೆದರುತ್ತಿರುವ ಸಮಯದಲ್ಲಿ ಬ್ಯಾಂಕ್‍ನವರು ಬಹಿರಂಗ ಹರಾಜನ್ನು ರಜಾದಿನದಂದು ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬ್ಯಾಂಕ್ ವ್ಯವಸ್ಥಾಪಕ ಆನಂದ್ ಮಾತನಾಡಿ, ನಾವು ಇಂದು ರೈತರ ಯಾವುದೇ ಒಡವೆಗಳನ್ನು ಮಾರಾಟ ಮಾಡುತ್ತಿಲ್ಲ. ವ್ಯಾಪಾರಿಗಳು ಹಾಗೂ ಸರಕಾರಿ ನೌಕರರ ಅಡಮಾನವಿಟ್ಟರುವ ಒಡವೆಗಳನ್ನು ಅವರಿಗೆ ನೊಟೀಸ್ ಜಾರಿ ಮಾಡಿ ಹರಾಜು ಮಾಡಲಾಗುತ್ತಿದೆ. ಆದರೂ, ಇಂದು ನಡೆಯಬೇಕಾದ ಒಡವೆ ಬಹಿರಂಗ ಹರಾಜನ್ನು ನಿಲ್ಲಿಸಲಾಗುವುದು ಎಂದು ತಿಳಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ನಾಗರಾಜು, ಸಿದ್ದು, ಚೇತನ್ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News