50 ಕೋಟಿ ರೂ. ಠೇವಣಿ ಸಂಗ್ರಹದ ಗುರಿ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ

Update: 2020-03-15 17:34 GMT

ಕೋಲಾರ: ಮಾ.28ರೊಳಗೆ ಕನಿಷ್ಟ 50 ಕೋಟಿ ರೂ. ಠೇವಣಿ ಸಂಗ್ರಹಕ್ಕೆ ಸಿಬ್ಬಂದಿ ಮುಂದಾಗಬೇಕೆಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

ಇಲ್ಲಿನ ಸಹಕಾರಿ ಯೂನಿಯನ್‍ನಲ್ಲಿ ನಡೆದ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರೀಯ ಬ್ಯಾಂಕ್ ಸಿಬ್ಬಂದಿ ಮಟ್ಟಕ್ಕೆ ವೇತನ ಮತ್ತು ಸೌಲಭ್ಯಗಳನ್ನು ಒದಗಿಸುತ್ತಿರುವಾಗ ಸಿಬ್ಬಂದಿ ಸಂಸ್ಥೆಯನ್ನು ದೇವಾಲಯದಂತೆ ಪರಿಗಣಿಸಿ ಗುರಿ ಸಾಧನೆಗೆ ಮುಂದಾಗಬೇಕಿದ್ದು ಇದರಲ್ಲಿ ಯಾವುದೇ ರಾಜಿ ಪ್ರಶ್ನೆಯೇ ಇಲ್ಲ ಎಂದರು.

ಇತಿಹಾಸ ಉಳಿಸಿ: ರಾಷ್ಟ್ರ ಮಟ್ಟದ ಸಾಧಕರ ಯಶೋಗಾಥೆ ಮೂಲಕ ನಬಾರ್ಡ್ ಚರಿತ್ರೆಯಲ್ಲಿ ನಿಂತಿರುವ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಮಹತ್ವವನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಸಿಬ್ಬಂದಿ ಕೆಲಸ ಮಾಡಬೇಕಿದೆ. ನಷ್ಟ ಹಾಗೂ ಭ್ರಷ್ಟಾಚಾರದಿಂದಾಗಿ ಬೀಗ ಹಾಕಬೇಕಾದ ಬ್ಯಾಂಕ್ ಅಭಿವೃದ್ಧಿಯ ಯಶಸ್ಸಿನತ್ತ ಸಾಗಿದ ಕುರಿತಾದ ಮಾಹಿತಿ ಪುಸ್ತಕವನ್ನು ನಬಾರ್ಡ್ ಇದೇ 18ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡುತ್ತಿದ್ದು, ಇದು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಶ್ರಮಕ್ಕೆ ಸಂದ ಗೌರವವಾಗಿದ್ದು ಇದನ್ನು ಉಳಿಸಿಕೊಂಡು ಹೋಗಲು ಎಲ್ಲ ಸಿಬ್ಬಂದಿ ಠೇವಣಿ ಸಂಗ್ರಹಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು.

ಶೇ.2ಕ್ಕೆ ಎನ್‍ಪಿಎ: ಸಾಲ ಮತ್ತು ಸುಸ್ತಿ ಸಾಲವನ್ನು ಉಳಿಸಿಕೊಳ್ಳದೆ ಸಿಬ್ಬಂದಿ ಸಕಾಲಕ್ಕೆ ವಸೂಲಿ ಮಾಡುವ ಮೂಲಕ ಎನ್‍ಪಿಎ ಶೇ.2ಕ್ಕೆ ಇಳಿಸುವುದರೊಂದಿಗೆ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳಬೇಕು. ಯಾವುದೇ ಮಹಿಳೆಯರು ಮತ್ತು ರೈತರು ಬಡ್ಡಿ ಮಾಫಿಯಾಕ್ಕೆ ಸಿಲುಕದಂತೆ ಎಚ್ಚರಿಕೆ ವಹಿಸುವುದರೊಂದಿಗೆ ಬಡವರ ಆಶಾಕಿರಣವಾಗಿ ಕೆಲಸ ಮಾಡಬೇಕು. ಸಾಲ ಮಂಜೂರಾತಿ ಮಾಡುವಾಗ ಇಡೀ ಕುಟುಂಬದ ಸದಸ್ಯರ ಜತೆಗೆ ಚರ್ಚೆ ಮಾಡಿ ಹಣ ನೀಡಬೇಕು. ಬ್ಯಾಂಕ್ ನಿರ್ದೇಶಕರು ಶಿಫಾರಸ್ಸು ಮಾಡಿದ್ದಾರೆಂದು ಯಾವುದೇ ಕಾರಣಕ್ಕೂ ಸಿಬ್ಬಂದಿ ಕಣ್ಣು ಮುಚ್ಚಿಕೊಂಡು ಸಾಲ ನೀಡಬಾರದು. ಸಾಲ ಸುಸ್ತಿ ಆದಾಗ ಸಿಬ್ಬಂದಿ ಹೊಣೆ ಆಗುವುದರಿಂದಾಗಿ ಗ್ರಾಹಕರ ಪೂರ್ವಾಪರ ಪರಿಶೀಲಿಸಿ ಸೌಲಭ್ಯ ಒದಗಿಸಬೇಕಿದ್ದು ಸಾಲ ವಾಪಸ್ ಬರುವುದಿಲ್ಲ ಎಂತಾದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದರು. 

1 ಲಕ್ಷ ರೂ. ಅಲ್ಪಾವಧಿ ಸಾಲ ಪಡೆದಿರುವ ಜಿಲ್ಲೆಯ 1014 ರೈತರ 9.24 ಕೋಟಿ ರೂ.ಮನ್ನಾ ಆಗಿದ್ದು, ಇದರ ಪ್ರಕ್ರಿಯೆ ಮಾ.25ರೊಳಗೆ ಪೂರ್ಣಗೊಳ್ಳುವುದರಿಂದಾಗಿ ಸಿಬ್ಬಂದಿ ರೈತರ ಜತೆ ಸಂಪರ್ಕ ಬೆಳೆಸಿ ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಕೃಷಿಕರು ಯೋಜನೆಯ ಲಾಭ ಹೊಂದುವಂತೆ ಮಾಡಬೇಕು ಎಂದು ಸೂಚಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್, ಮೋಹನ್ ರೆಡ್ಡಿ,ಎನ್.ನಾಗಿರೆಡ್ಡಿ,ಬಿ.ವಿ.ವೆಂಕಟರೆಡ್ಡಿ,ಕೆ.ಎಚ್.ಚನ್ನರಾಯಪ್ಪ,ಎಂಡಿ ರವಿ, ಎಜಿಎಂ ಬೈರೇಗೌಡ, ಚೌಡಪ್ಪ,ನಾಗೇಶ್ ಇದ್ದರು.

ಮಂಗಳೂರಿನಲ್ಲಿ ಮೊಬೈಲ್ ಬ್ಯಾಂಕಿಗ್ ಯಶಸ್ವಿ ಆಗಿದ್ದು, ಈ ನಿಟ್ಟಿನಲ್ಲಿ ಬ್ಯಾಂಕ್ ಎಂಡಿ ನೇತೃತ್ವದ ತಂಡವು ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಿ ಪರಿಶೀಲನೆ ನಡೆಸಲಿದೆ. ನಬಾರ್ಡ್ 2 ವಾಹನಗಳನ್ನು ಉಚಿತವಾಗಿ ನೀಡಲು ಮುಂದೆ ಬಂದಿದ್ದು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕವಾಗಿ ವಾಹನಗಳನ್ನು ಒದಗಿಸುವ ಮೂಲಕ ಗ್ರಾಮಾಂತರ ಜನತೆಗೆ ಮನೆ ಬಾಗಿಲಲ್ಲೇ ಬ್ಯಾಂಕಿಂಗ್ ಸೇವೆಯನ್ನು ಒದಗಿಸಲಾಗುವುದು.
- ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಅಧ್ಯಕ್ಷರು, ಡಿಸಿಸಿ ಬ್ಯಾಂಕ್   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News