ಸರಕಾರಿ ನೌಕರರ ಬಯೋಮೆಟ್ರಿಕ್ ಹಾಜರಾತಿ ರದ್ದು: ರಾಜ್ಯ ಸರಕಾರ ಆದೇಶ

Update: 2020-03-16 17:20 GMT

ಬೆಂಗಳೂರು, ಮಾ.16: ಕೊರೋನ ವೈರಸ್ ಸೋಂಕು ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರಿ ನೌಕರರ ಬಯೋಮೆಟ್ರಿಕ್ ಹಾಜರಾತಿಯನ್ನು ತಾತ್ಕಾಲಿಕವಾಗಿ ರದ್ದುಪಡಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ದಿನೇ ದಿನೇ ರಾಜ್ಯದಲ್ಲಿ ಕೊರೋನ ವೈರಸ್ ಸೋಂಕಿತರ ಸಂಖ್ಯೆ ಏರಿಕೆ ಹಿನ್ನೆಲೆ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ, ಮುಂಜಾಗ್ರತಾ ಕ್ರಮವಾಗಿ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ, ನೌಕರರ ಬಯೋ ಮೆಟ್ರಿಕ್ ಹಾಜರಾತಿಯನ್ನು ತಾತ್ಕಾಲಿಕವಾಗಿ ರದ್ದು ಪಡಿಸಿದೆ.

ಈ ಕುರಿತಂತೆ ಸುತ್ತೋಲೆ ಹೊರಡಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ, ಕೊರೋನ ವೈರಸ್ ಹರಡುವ ವೇಗ ಮತ್ತು ವಿಧಾನವನ್ನು ಗಂಭೀರತೆಯನ್ನು ಹೆಚ್ಚಿಸಿದೆ. ರಾಜ್ಯದಲ್ಲಿ ಕೆಲವೊಂದು ಕಡೆ ಕೊರೋನ ವೈರಾಣು ಸಮಸ್ಯೆ ಕಂಡುಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರಕಾರವು ಮಾ.31ರವರೆಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯಿಂದ ವಿನಾಯಿತಿ ನೀಡಿರುತ್ತದೆ.

ಇದೇ ಮಾದರಿಯಲ್ಲಿಯೇ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ನೌಕರರು ಬಯೋಮೆಟ್ರಿಕ್‌ನಲ್ಲಿ ಹಾಜರಾತಿ ನಮೂದಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಅಧಿಕಾರಿ, ಸಿಬ್ಬಂದಿಗಳ ಆರೋಗ್ಯದ ದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮಾ.31ರವರೆಗೆ ಬಯೋಮೆಟ್ರಿಕ್ ಹಾಜರಾತಿ ನಮೂದಿಸುವಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಮುಂಜಾಗೃತ ಕ್ರಮವಾಗಿ, ಇಂದಿನವರೆಗೆ 2,221 ಜನರನ್ನು ಅವಲೋಕನಕ್ಕಾಗಿ ಗುರುತಿಸಲ್ಪಟ್ಟಿದೆ. ಅದರಲ್ಲಿ, 344 ಜನರು ತಮ್ಮ 28 ದಿನಗಳ ಅವಲೋಕನ ಅವಧಿಯನ್ನು ಮುಗಿಸಿರುತ್ತಾರೆ. 1,830 ಜನರನ್ನು ಮನೆಯಲ್ಲಿ ಹಾಗೂ 44 ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ನಿಗಾವಹಿಸಲಾಗಿದೆ.

-ಶ್ರೀರಾಮುಲು, ಆರೋಗ್ಯ ಸಚಿವ

ಕೈದಿಗಳ ಭೇಟಿಗೂ ತಟ್ಟಿದ ಬಿಸಿ

ಕೊರೋನ ವೈರಸ್ ಸೋಂಕು ಹಿನ್ನೆಲೆ ಇಲ್ಲಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಭೇಟಿಗೂ ಸಾರ್ವಜನಿಕರ ಪ್ರವೇಶ ರದ್ದುಗೊಳಿಸಲಾಗಿದೆ. 15 ದಿನಗಳ ಕಾಲ ಯಾರು ಭೇಟಿ ನೀಡಬಾರದೆಂದು ಅಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News