ಡಾ.ಪಾಟೀಲ ಪುಟ್ಟಪ್ಪ ಅವರಿಗೆ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ
ಬೆಂಗಳೂರು, ಮಾ. 17: ನಿನ್ನೆ ರಾತ್ರಿ ನಿಧನರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಕನ್ನಡದ ಕಟ್ಟಾಳು, ಹಿರಿಯ ಸಾಹಿತಿ, ಪತ್ರಕರ್ತ ಹಾಗೂ ಶತಾಯುಷಿ ಡಾ.ಪಾಟೀಲ ಪುಟ್ಟಪ್ಪ(ಪಾಪು) ಅವರಿಗೆ ವಿಧಾನಮಂಡಲ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಂಗಳವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್, ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿ, ಪಾಟೀಲ್ ಪುಟ್ಟಪ್ಪ ಅವರು, 1919ರ ಜನವರಿ 14ರಂದು ಹಾವೇರಿ ತಾಲೂಕಿನ ಕುರುಬಗೊಂಡ ಹಳ್ಳಿಯಲ್ಲಿ ಜನಿಸಿದ್ದು, ಕಾನೂನು ಪಧವೀದರರಾಗಿದ್ದರು. ಕ್ಯಾಲಿಫೋರ್ನಿಯಾದಲ್ಲಿ ಪತ್ರಿಕೋದ್ಯಮ ಶಿಕ್ಷಣ ಪಡೆದಿದ್ದ ಅವರು ‘ನನ್ನ ನಾಡು’ ಎಂಬ ಹಸ್ತಪತ್ರಿಕೆ ಆರಂಭಿಸಿದ್ದರು. ವೃತ್ತಿಯಲ್ಲಿ ವಕೀಲರಾಗಿದ್ದ ಪಾಪು, ವಿಶಾಲ ಕರ್ನಾಟಕ ವಾರಪತ್ರಿಕೆ ಸಂಪಾದಕರಾಗಿ, ನಂತರ ತಮ್ಮದೇ ಆದ ಸಾಪ್ತಾಹಿಕ ‘ಪ್ರಪಂಚ’ ಎಂಬ ಪತ್ರಿಕೆಯನ್ನು ಆರಂಭಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಪಾಪು, ಚಲೇಜಾವ್ ಚಳವಳಿಯಲ್ಲಿ ಭಾಗವಹಿಸಿ ಒಂದು ವರ್ಷ ಭೂಗತ ಕಾರ್ಯಕರ್ತರಾಗಿದ್ದರು.
1962ರಿಂದ 1974ರ ಅವಧಿಯಲ್ಲಿ ಎರಡು ಭಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಕನ್ನಡ ಅಸ್ಮಿತೆಯ ಪರ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದರು. 70ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡದಲ್ಲಿಯೇ ಆಡಳಿತ ಹಾಗೂ ಶಿಕ್ಷಣವನ್ನು ಕಡ್ಡಾಯವಾಗಿ ಜಾರಿಗೆ ತರಬೇಕೆಂಬ ದಿಸೆಯಲ್ಲಿ ನಡೆದ ಹೋರಾಟದ ನೇತೃತ್ವ ವಹಿಸಿದ್ದರಲ್ಲದೆ, ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು ಎಂದು ಸ್ಮರಿಸಿದರು.
ನಾಡೋಜ, ನೃಪತುಂಗ, ಬಸವಶ್ರೀ, ಟಿಎಸ್‌ಆರ್, ಪತ್ರಿಕಾ ಅಕಾಡೆಮಿ ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಪಾಪು ಭಾಜನರಾಗಿದ್ದು, ಕರ್ನಾಟಕ ವಿವಿ ಗೌರವ ಡಾಕ್ಟರೇಟ್ ಸೇರಿ ಹಲವು ಸನ್ಮಾನಗಳು ಅವರನ್ನು ಅರಸಿ ಬಂದಿದ್ದವು ಎಂದು ಸ್ಪೀಕರ್ ಅವರ ಗುಣಗಾನ ಮಾಡಿದರು.
ನಿರ್ಣಯ ಬೆಂಬಲಿಸಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ‘ಪಾಪು ಅವರು ಯಾರೊಂದಿಗೂ ರಾಜೀ ಮಾಡಿಕೊಳ್ಳಲಿಲ್ಲ. ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ನೇರವಾಗಿಯೇ ಟೀಕೆ ಮಾಡುತ್ತಿದ್ದರು. ಎಂದೂ ಅವರು ಯಾರ ಮುಲಾಜಿಗೂ ಒಳಗಾಗದೆ ಅತ್ಯಂತ ಸರಳ ರೀತಿಯಲ್ಲಿ ಜೀವಿಸಿದ ಅಪ್ಪಟ ಗಾಂಧಿವಾದಿಯಾಗಿದ್ದರು ಎಂದು ಸ್ಮರಿಸಿದರು.
ಆ ಬಳಿಕ ಮೃತರ ಗೌರವಾರ್ಥ ಸದನದಲ್ಲಿ ಒಂದು ನಿಮಿಷ ಮೌನ ಆಚರಿಸಲಾಯಿತು. ಸಂತಾಪ ಸೂಚಕ ನಿರ್ಣಯದ ಪ್ರತಿಯನ್ನು ಪಾಪು ಅವರ ಕುಟುಂಬದವರಿಗೆ ಕಳುಹಿಸಿಕೊಡುವುದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿದರು.
ಸ್ಮಾರಕ ಮಾಡಿ: ‘ನನ್ನ ಕನ್ನಡ ಭಾಷಾ ಪ್ರೇಮಕ್ಕೆ ಪಾಪು ಅವರು ಪ್ರೇರಣೆ. ದೀರ್ಘ ಕಾಲ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಪಾಪು ಅವರು ಕೊನೆಯ ಉಸಿರು ಇರುವವರೆಗೂ ಕನ್ನಡ ಭಾಷೆ, ನೆಲ, ಜಲಕ್ಕಾಗಿ ಶ್ರಮಿಸಿದ್ದಾರೆ. ಹೀಗಾಗಿ ಸರಕಾರ ಅವರ ಹೆಸರಿನಲ್ಲಿ ಸ್ಮಾರಕ ಸ್ಥಾಪನೆ ಮಾಡಬೇಕು’
-ಸಿದ್ದರಾಮಯ್ಯ, ವಿಪಕ್ಷ ನಾಯಕ
ಸ್ವಾತಂತ್ರ್ಯ ಹೋರಾಟಗಾರ, ಚಲೇಜಾವ್ ಚಳವಳಿಯ ಸಕ್ರಿಯ ಕಾರ್ಯಕರ್ತ, ಗೋಕಾಕ್ ಚಳವಳಿಯ ನೇತೃತ್ವ ವಹಿಸಿದ್ದ ಹಿರಿಯ ಪತ್ರಕರ್ತರಾಗಿದ್ದ ಪಾಟೀಲ ಪುಟ್ಟಪ್ಪ(ಪಾಪು) ಅವರ ನಿಧನಕ್ಕೆ ವಿಧಾನಪರಿಷತ್ತಿನಲ್ಲಿ ಸಂತಾಪ ಸೂಚಿಸಿ, ಅವರ ಗೌರವಾರ್ಥ ಅರ್ಧ ಗಂಟೆ ಸದನವನ್ನು ಮುಂದೂಡಲಾಯಿತು.