ಮೈಸೂರಿನ ಬಳಿಕ ಮತ್ತೊಂದು ಜಿಲ್ಲೆಯಲ್ಲಿ ಹಕ್ಕಿಜ್ವರ ದೃಢ: ಹೈಅಲರ್ಟ್ ಘೋಷಿಸಿದ ಜಿಲ್ಲಾಧಿಕಾರಿ

Update: 2020-03-17 13:07 GMT
ಸಾಂದರ್ಭಿಕ ಚಿತ್ರ

ದಾವಣಗೆರೆ, ಮಾ.17: ಕೊರೋನ ಭೀತಿಯ ಮಧ್ಯೆ ಜಿಲ್ಲೆಯಲ್ಲಿ ಹಕ್ಕಿಜ್ವರವೂ ಕಾಣಿಸಿಕಿಕೊಂಡಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ಹೊರವಲಯದಲ್ಲಿ ಅಭಿಷೇಕ್ ಎಂಬವರ ಕೋಳಿ ಫಾರಂನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಜಿಲ್ಲಾಡಳಿತ, ತಾಲೂಕು ಆಡಳಿತ, ಆರೋಗ್ಯ ಇಲಾಖೆಗಳ ನಿದ್ದೆಗೆಡಿಸಿದೆ. 

ಬನ್ನಿಕೋಡು ಸಮೀಪದ ಕೋಳಿ ಫಾರಂನ ಹಕ್ಕಿಜ್ವರ ಸೋಂಕಿನ ಬಗ್ಗೆ ಮಧ್ಯಪ್ರದೇಶದ ಭೋಪಾಲ್‍ನ ಲ್ಯಾಬ್‍ಗೆ ಸ್ಯಾಂಪಲ್‍ಗಳನ್ನು ಕಳಿಸಲಾಗಿತ್ತು. ಲ್ಯಾಬ್‍ನಿಂದ ಬಂದ ವರದಿಯಲ್ಲಿ ಮೈಸೂರಿನ ಜೊತೆಗೆ ದಾವಣಗೆರೆ ಜಿಲ್ಲೆಯ ಬನ್ನಿಕೋಡು ಗ್ರಾಮದಲ್ಲೂ ಹಕ್ಕಿ ಜ್ವರ ಇರುವುದು ದೃಢಪಟ್ಟಿದೆ. 

ವರದಿ ಕೈ ಸೇರುತ್ತಿದ್ದಂತೆಯೆ ಎಚ್ಚೆತ್ತುಕೊಂಡ ಜಿಲ್ಲಾಡಳಿತವು ಕ್ವಿಕ್ ರ‍್ಯಾಪಿಡ್ ಆಕ್ಷನ್ ಟೀಂ ಸಿದ್ಧಪಡಿಸಿದ್ದು, ಹರಿಹರದ ಬನ್ನಿಕೋಡು ಗ್ರಾಮದ ಕೋಳಿ ಫಾರಂಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಾಗಿದೆ. ಆ ಕೋಳಿ ಫಾರಂನ ಸುತ್ತಮುತ್ತಲಿನ 10 ಕಿ.ಮೀ. ವ್ಯಾಪ್ತಿಯನ್ನು ರೇಡಿಯೇಷನ್ ವಲಯವೆಂದು ಗುರುತಿಸಿ, ಹೈಅಲರ್ಟ್ ಘೋಷಿಸಿ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಆದೇಶ ಹೊರಡಿಸಿದ್ದಾರೆ. 

ಇತ್ತೀಚೆಗೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಮುಗಿದಿದ್ದು, ಜಾತ್ರೆ ಸಂದರ್ಭದಲ್ಲಿ ಮಹಾರಾಷ್ಟ್ರ, ಕೇರಳದಿಂದ ಕಡಿಮೆ ದರಕ್ಕೆ ಕೋಳಿಗಳು ಬಂದಿದ್ದವು. ಇದರಿಂದಾಗಿ ಸ್ಥಳೀಯ ಕೋಳಿ ಫಾರಂ ಮಾಲಕರು, ಕೋಳಿ ಮಾರಾಟಗಾರರು ವ್ಯಾಪಾರ ಇಲ್ಲದೇ ಸುಮಾರು 7-8 ಸಾವಿರ ಕೋಳಿಗಳನ್ನು ಸಾಯಿಸಿದ್ದರು. ಹೀಗೆ ಸಾಮೂಹಿಕವಾಗಿ ಕೋಳಿಗಳ ಮಾರಣ ಹೋಮ ಆಗಿದ್ದರಿಂದಲೇ ಬನ್ನಿಕೋಡು ಗ್ರಾಮದ ಕೋಳಿ ಫಾರಂನಲ್ಲಿ ಹಕ್ಕಿಜ್ವರ ಬಂದಿರಬಹುದೆಂದು ಶಂಕಿಸಲಾಗಿದೆ. ಭೋಪಾಲ್ ಲ್ಯಾಬ್‍ನ ವರದಿಯೂ ಬನ್ನಿಕೋಡು ಕೋಳಿ ಫಾರಂನ ಕೋಳಿಗಳಲ್ಲಿ ಹಕ್ಕಿ ಜ್ವರದ ಸೋಂಕು ಇರುವುದನ್ನು ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಕೋಳಿ ಫಾರಂನಿಂದ 1 ಕಿಮೀ ವ್ಯಾಪ್ತಿಯ ಪ್ರದೇಶ ಸೋಂಕು ಪೀಡಿತ ಪ್ರದೇಶವಾಗಿದ್ದು, 1 ರಿಂದ 10 ಕಿಮೀ ವ್ಯಾಪ್ತಿಯ ಪ್ರದೇಶವನ್ನು ಸರ್ವೇಕ್ಷಣಾ ವಲಯವೆಂದು ಘೋಷಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News