ವಿದೇಶದಿಂದ ಬಂದ ಇಬ್ಬರಲ್ಲೂ ಕೊರೋನ ವೈರಸ್ ಇಲ್ಲ: ಮಂಡ್ಯ ಜಿಲ್ಲಾಧಿಕಾರಿ ವೆಂಕಟೇಶ್ ಸ್ಪಷ್ಟನೆ

Update: 2020-03-17 17:30 GMT

ಮಂಡ್ಯ, ಮಾ.17: ವಿದೇಶದಿಂದ ಬಂದಿರುವ ಜಿಲ್ಲೆಯ ಇಬ್ಬರಿಗೆ ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಅವರಲ್ಲಿ ಕೊರೋನ ವೈರಸ್ ಇಲ್ಲವೆಂದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.

ಸೌದಿಯಿಂದ ಬಂದಿರುವ ನಾಗಮಂಗಲದ ಮಹಿಳೆ(50) ಹಾಗೂ ಮೆಲ್ಬೋರ್ನ್‍ನಿಂದ ಬಂದಿರುವ ಶ್ರೀರಂಗಪಟ್ಟಣದ ಯುವಕನ(34) ರಕ್ತ ಮತ್ತು ಕಫವನ್ನು ಮೈಸೂರಿಗೆ ಪರೀಕ್ಷೆಗೆ ಕಳುಹಿಸಲಾಗಿತ್ತು. ನೆಗೆಟಿವ್ ವರದಿ ಬಂದಿದ್ದು, ಕೊರೋನಾ ವೈರಸ್ ಪಾಸಿಟಿವ್ ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇಬ್ಬರಿಗೂ ಸ್ವಲ್ಪ ಪ್ರಮಾಣದಲ್ಲಿ ಜ್ವರ ಹಾಗೂ ಗಂಟಲು ಕೆರತವಿದ್ದು, ಸದ್ಯ ಇಬ್ಬರೀ ಆರಾಮವಾಗಿ ಇದ್ದಾರೆ. ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ ಎಂದರು.

ನಾಗಮಂಗಲದ ಮಹಿಳೆ ಜೊತೆ 7 ಜನ ಸೌದಿಯಿಂದ ಬಂದಿದ್ದು, ಯಾರಿಗೂ ಆರೋಗ್ಯ ಸಮಸ್ಯೆ ಇಲ್ಲ. ಹದಿನಾಲ್ಕು ದಿನ ನಿಗಾ ವಹಿಸಲಾಗಿತ್ತು. ಕಲಬುರ್ಗಿಯ ಮೃತ ವ್ಯಕ್ತಿಗೂ ಈಕೆಗೂ ಯಾವುದೇ ಸಂಬಂಧ ಇಲ್ಲ. ಆಕೆ ಆರೋಗ್ಯವಾಗಿದ್ದು, ಕೇಂದ್ರದ ನಿಯಾಮವಳಿ ಪ್ರಕಾರ ನಿಗಾ ಇಡಲಾಗಿದೆ ಎಂದು ಅವರು ಹೇಳಿದರು.

ಶ್ರೀರಂಗಪಟ್ಟಣ ಮೂಲದ ಯುವಕ ಥೈಲ್ಯಾಂಡ್ ಮುಖಾಂತರ ಮಿಲ್ಬೋರ್ನ್‍ಗೆ ತರಬೇತಿಗೆ ಹೋಗಿದ್ದು, ಮಾ.1ರಂದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಅವರನ್ನು ಸ್ಕ್ರೀನಿಂಗ್ ಮಾಡಿದ್ದು, ಮೂರು ದಿನದಿಂದ ಕೆಮ್ಮು ಇದೆ. ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 30 ಜನರ ಮೇಲೆ ಸಂಪೂರ್ಣ ನಿಗಾ ವಹಿಸಲಾಗಿದ್ದು, ಪ್ರತಿ ದಿನ ವರದಿ ತರಿಸಿಕೊಳ್ಳಲಾಗುತ್ತಿದೆ. ಜತೆಗೆ ಜಿಲ್ಲಾಡಳಿತ ಹಕ್ಕಿ ಜ್ವರದ ಬಗ್ಗೆ ನಿರಂತರವಾಗಿ ಕ್ರಮವಹಿಸಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಸಹಾಯವಾಣಿ ಕೇಂದ್ರ
ಯಾರಿಗಾದರೂ ವಿಪರೀತ ಕೆಮ್ಮು ಜ್ವರ ಶೀತದಿಂದ ಬಳಲುತ್ತಿರುವುದು ಕಂಡು ಬಂದಲ್ಲಿ ತಕ್ಷಣವೇ ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿ ಕೇಂದ್ರ ಸಂಖ್ಯೆ:1077, ಜಿಲ್ಲಾ ಆರೋಗ್ಯ ಇಲಾಖೆ ಸಹಾಯವಾಣಿ ಸಂಖ್ಯೆ:104, ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಹಾಯವಾಣಿ ಸಂಖ್ಯೆ:100ಗೆ ತಿಳಿಸಬೇಕು ಎಂದು ಡಾ.ಎಂ.ವಿ.ವೆಂಕಟೇಶ್ ಮನವಿ ಮಾಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಚೇಗೌಡ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. 

‘ಕೆಲವರು ಸಾಮಾಜಿಕ ತಾಣದಲ್ಲಿ ಮಾಹಿತಿ ರಹಿತ ವಿಚಾರಗಳನ್ನು ಹರಡುತ್ತಿದ್ದು, ಇದರ ಬಗ್ಗೆ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು. ಈ ರೀತಿ ಅನಗತ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುವುದು, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು’.
-ಡಾ.ಎಂ.ವಿ.ವೆಂಕಟೇಶ್, ಮಂಡ್ಯ ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News