ಬಯಲುಸೀಮೆಗೆ ಕುಡಿಯುವ ನೀರಿಗೆ ಕೊಳವೆಬಾವಿ ಕೊರೆಸಲು ಕ್ರಮ: ಸಚಿವ ಕೆ.ಎಸ್.ಈಶ್ವರಪ್ಪ

Update: 2020-03-18 12:28 GMT

ಬೆಂಗಳೂರು, ಮಾ. 18: ಬಯಲುಸೀಮೆ ಜಿಲ್ಲೆಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜಲಮೂಲಗಳನ್ನು ಹುಡುಕಾಟದ ಪ್ರಯತ್ನ ನಡೆಸಲಾಗಿದೆ. ಜತೆಗೆ ಭೂ ಸರ್ವೇಕ್ಷಣ ಇಲಾಖೆ ಸಲಹೆ ಪಡೆದು ಕೊಳವೆಬಾವಿ ಕೊರೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಪಕ್ಷೇತರ ಸದಸ್ಯ ಶರತ್ ಕುಮಾರ್ ಬಚ್ಚೇಗೌಡ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಕೋಲಾರ, ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರ ಸೇರಿ ವಿವಿಧೆಡೆ 1,500ಅಡಿ ವರೆಗೂ ಕೊರೆದರೂ ನೀರು ಸಿಗದಂತಹ ಪರಿಸ್ಥಿತಿ ಉಂಟಾಗಿದೆ ಎಂದರು.

2019-20ನೆ ಸಾಲಿನಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ವಿವೇಚನ ಅನುದಾನದಡಿ ಪ್ರತಿ ಜಿಲ್ಲೆಗೆ 1ಕೋಟಿ ರೂ.ಕುಡಿಯುವ ನೀರಿನ ಕಾಮಗಾರಿಗಳಿಗೆ ನೀಡಲಾಗಿದೆ. ತುರ್ತು ನೀರಿನ ಸಮಸ್ಯೆ ಬಗೆಹರಿಸಲು ಟಾಸ್ಕ್‌ಫೋರ್ಸ್ ಯೋಜನೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಹೊಸಕೋಟೆ ತಾಲೂಕಿಗೆ ಪ್ರಸ್ತಕ ಸಾಲಿನಲ್ಲಿ ಕುಡಿಯುವ ನೀರಿನ ಕಾಮಗಾರಿಗಾಗಿ ವಿವಿಧ ಯೋಜನೆಗಳಡಿ ಒಟ್ಟು 999ಕೋಟಿ ರೂ.ಅನುದಾನ ಹಂಚಿಕೆ ಮಾಡಲಾಗಿದೆ ಎಂದ ಅವರು, ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದರು.

ತಡೆಹಿಡಿದ ಕಾಮಗಾರಿ ಪೂರ್ಣ: ಮಂಡ್ಯ ಕ್ಷೇತ್ರದ ವ್ಯಾಪ್ತಿಯಲ್ಲಿ 2018-19, 2019-20ನೆ ಸಾಲಿನ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು. ಈಗಾಗಲೇ ಹಣ ಬಿಡುಗಡೆಗೆ ಸಿಎಂ ಸಮ್ಮತಿಸಿದ್ದು, ಈ ಬಗ್ಗೆ ಆತಂಕ ಬೇಡ ಎಂದು ಜೆಡಿಎಸ್ ಸದಸ್ಯ ಎಂ.ಶ್ರೀನಿವಾಸ್ ಕೇಳಿದ ಪ್ರಶ್ನೆಗೆ ಸಚಿವ ಈಶ್ವರಪ್ಪ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News