ಸೋಮಣ್ಣ, ಪ್ರತಾಪ್ ಸಿಂಹರನ್ನು ಹುಡುಕಿಕೊಡಿ: ಕೊಡಗು ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ !

Update: 2020-03-18 14:11 GMT

ಮಡಿಕೇರಿ, ಮಾ.18: ರಾಜ್ಯದೆಲ್ಲೆಡೆ ಕೊರೋನ ಭೀತಿ ಎದುರಾಗಿದ್ದು, ಕೊಡಗು ಜಿಲ್ಲೆಯಲ್ಲೂ ಶಂಕಿತ ಸೋಂಕಿತರು ಪತ್ತೆಯಾಗಿದ್ದಾರೆ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಜಿಲ್ಲಾ ಉಸ್ತವಾರಿ ಸಚಿವರು ಹಾಗೂ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದರು ಜಿಲ್ಲೆಗೆ ಬಾರದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಮತ್ತು ಇಬ್ಬರನ್ನು ಹುಡುಕಿಕೊಡುವಂತೆ ಒತ್ತಾಯಿಸಿ ಜಾತ್ಯತೀತ ಜನತಾದಳದ ಕೊಡಗು ಘಟಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. 

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ಜಿಲ್ಲೆಗೆ ಬಾರದೆ ಹಲವು ತಿಂಗಳುಗಳೇ ಕಳೆದಿದ್ದು, ಸಂದಿಗ್ಧ ಪರಿಸ್ಥಿತಿಯಲ್ಲೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇದರಿಂದ ಆತಂಕದ ವಾತಾವರಣ ಎದುರಾಗಿದ್ದು, ಇಬ್ಬರ ಪತ್ತೆಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಎಸ್‍ಪಿ ಅವರಲ್ಲಿ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಗಣೇಶ್ ಅವರು, ರಾಜ್ಯದೆಲ್ಲೆಡೆ ಕೊರೋನ ಭೀತಿ ಇರುವಂತೆ ಕೊಡಗು ಜಿಲ್ಲೆಯಲ್ಲೂ ಆತಂಕದ ವಾತಾವರಣವಿದೆ. ಜಿಲ್ಲೆಯ ಪಕ್ಕದ ಕೇರಳ ಮತ್ತು ಮೈಸೂರಿನಲ್ಲಿ ಹಕ್ಕಿಜ್ವರ ಕೂಡ ಕಾಣಿಸಿಕೊಂಡಿದೆ. ಕೊಡಗಿನಲ್ಲಿ ತುರ್ತಾಗಿ ಅಗತ್ಯ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಇದರ ಉಸ್ತವಾರಿ ವಹಿಸಿಕೊಳ್ಳಬೇಕಾದ ಜಿಲ್ಲಾ ಉಸ್ತುವಾರಿ ಸಚಿವರೇ ಬಾರದಿದ್ದರೆ ಜನರ ಗತಿಯೇನು ಎಂದು ಪ್ರಶ್ನಿಸಿದರು.

ಸಂಸದರಿಗೂ ಮಹತ್ತರವಾದ ಜವಬ್ದಾರಿ ಇದೆ, ಆದರೆ ಅವರು ಕೂಡ ಜಿಲ್ಲೆಗೆ ಬಾರದೆ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಆರೋಗ್ಯ ಇಲಾಖೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡಲು ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಬೇಕಾಗಿತ್ತು. ಇಲ್ಲಿಯವರೆಗೆ ಸಚಿವರು ಜಿಲ್ಲೆಯ ಕಡೆ ಮುಖ ಮಾಡದೆ ಇರುವುದನ್ನು ಗಮನಿಸಿದರೆ ಹಲವು ಸಂಶಯಗಳು ಮೂಡುತ್ತಿದೆ. ಇದೇ ಕಾರಣಕ್ಕಾಗಿ ಎಸ್‍ಪಿ ಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

ತಕ್ಷಣ ಸಚಿವ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ಜಿಲ್ಲೆಗೆ ಬಂದು ತಮ್ಮ ಜವಬ್ದಾರಿಗಳನ್ನು ನಿಭಾಯಿಸದಿದ್ದಲ್ಲಿ ಉಚ್ಚನ್ಯಾಯಾಲದಲ್ಲಿ ಪ್ರಕರಣ ದಾಖಲಿಸುವುದಾಗಿ ಗಣೇಶ್ ಎಚ್ಚರಿಕೆ ನೀಡಿದರು.

ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಎನ್.ಸಿ.ಸುನಿಲ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸಾಕ್ ಖಾನ್, ಸಂಘಟನಾ ಕಾರ್ಯದರ್ಶಿ ಎಂ.ಎ.ಇಬ್ರಾಹಿಂ, ಅಬ್ದುಲ್ಲ ಬೆಟ್ಟಗೇರಿ, ಉಪಾಧ್ಯಕ್ಷ ರೆಹಮಾನ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ನಗರಾಧ್ಯಕ್ಷೆ ಸುನಂದ, ನಗರ ಪ್ರಧಾನ ಕಾರ್ಯದರ್ಶಿ ಜೆಸಿಂತಾ ಹೂವಲ್ಲಿ, ಉಪಾಧ್ಯಕ್ಷೆ ಮಮತಾ, ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖಲೀಲ್, ನಗರ ಎಸ್.ಸಿ. ಘಟಕದ ಅಧ್ಯಕ್ಷ ರವಿ, ನಗರ ಯುವ ಘಟಕದ ಅಧ್ಯಕ್ಷ ರವಿಕಿರಣ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಗಣೇಶ್ ಸೇರಿದಂತೆ ಕಾರ್ಯಕರ್ತರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News