ಅಂಕೋಲಾ: ಬ್ರೌನ್ ಶುಗರ್ ಸಾಗಿಸುತ್ತಿದ್ದ ನಾಲ್ವರ ಬಂಧನ: 2 ಕೋಟಿ ರೂ. ಮೌಲ್ಯದ ವಸ್ತು ಜಪ್ತಿ

Update: 2020-03-18 14:18 GMT

ಕಾರವಾರ, ಮಾ.17: ಯಲ್ಲಾಪುರದಿಂದ ಅಂಕೋಲಾ ಕಡೆಗೆ ಸಾಗಿಸುತ್ತಿದ್ದ 2 ಕೋಟಿ ರೂ. ಮೌಲ್ಯದ 2.68 ಕೆ.ಜಿ. ಬ್ರೌನ್ ಶುಗರ್ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಎಸ್.ಪಿ. ಶಿವಪ್ರಕಾಶ್ ದೇವರಾಜು ಹೇಳಿದರು.

ಬುಧವಾರ ನಗರದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಬರುತ್ತಿದ್ದ ಹುಂಡೈ ಐ-20 ಕಾರನ್ನು ಮಂಗಳವಾರ ರಾತ್ರಿ ಅಂಕೋಲಾದ ಬಾಳಿಗೊಳಿ ಕ್ರಾಸ್ ಹತ್ತಿರ ವಶಪಡಿಸಿಕೊಳ್ಳಲಾಗಿದೆ ಎಂದರು.

ಮಾದಕ ವಸ್ತು ಸಾಗಿಸುತ್ತಿದ್ದ ಅಧಿಕೃತ ಮಾಹಿತಿನ್ವಯ ಉತ್ತರ ಕನ್ನಡ ಜಿಲ್ಲಾ ಅಪರಾಧ ಗುಪ್ತ ವಾರ್ತೆ ಘಟಕದ ಪೊಲೀಸ್ ನಿರೀಕ್ಷಕರಾದ ನಿಶ್ಚಲಕುಮಾರ ಡಿ.ಎಮ್ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಎ.ಎಸ್.ಐ ವಿನ್ಸೆಂಟ್ ಫರ್ನಾಂಡಿಸ್, ಸಿ.ಹೆಚ್.ಸಿ ಸದಾನಂದ ಸಾವಂತ, ಗಣೇಶ್ ನಾಯ್ಕ, ರುದ್ರೇಶ್ ಮೇತ್ರಾಣಿ, ಎಪಿಸಿ ಮಾಧವ ನಾಯಕ್, ಮಂಜುನಾಥ ನಾಯಕ ಮತ್ತು ಮಂಜುನಾಥ್ ಎಸ್ ನಾಯ್ಕ್ ಅವರು ದಾಳಿ ಮಾಡಿ ವಶಪಡಿಸಿಕೊಂಡಿದ್ದು, ಬ್ರೌನ್ ಶುಗರ್ ಅನ್ನು ಎಫ್.ಎಸ್.ಎಲ್ ವರದಿಗೆ ಕಳುಹಿಸಲಾಗಿದೆ ಎಂದರು.

ಆರೋಪಿಗಳಾದ ನಾರಾಯಣ(35), ಚಂದ್ರಹಾಸ್ ಗುನಗಾ(29), ವೀರಭದ್ರಾ ಹೆಗಡೆ(43), ಪ್ರವೀಣ್ ಭಟ್(30) ಬಂಧಿತರಾಗಿದ್ದು, ಬಂಧಿತರಿಂದ ಮಾರುತಿ 800 ಕಾರು, 4 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News