ರೈತ ಸಮುದಾಯಕ್ಕೆ ಬಿಜೆಪಿ ಸರಕಾರದಿಂದ ದ್ರೋಹ: ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್

Update: 2020-03-18 14:29 GMT

ಬೆಂಗಳೂರು, ಮಾ.18: ಪ್ರಸ್ತುತ ಅಧಿವೇಶನದಲ್ಲಿ ರಾಜ್ಯ ಸರಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದು, ಈ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ಕೈಬಿಡಬೇಕು ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಒತ್ತಾಯಿಸಿದ್ದಾರೆ.

ಬುಧವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಸುಧಾರಣೆ ಕಾಯ್ದೆ ಜಾರಿಗೆ ತರುವ ಮುನ್ನ ರಾಜ್ಯ ಸರಕಾರ ರೈತರು, ಕೃಷಿ ವಿಜ್ಞಾನಿಗಳೊಂದಿಗೆ ಭೂ ಸುಧಾರಣೆ ಕಾಯ್ದೆ ಕುರಿತು ವಿಸ್ತೃತ ಚರ್ಚೆ ನಡೆಸಬೇಕು. ಈ ಕಾಯ್ದೆಯಿಂದ ರೈತರಿಗೆ ಏನು ಉಪಯೋಗ ಆಗಲಿದೆ ಎಂಬುದನ್ನು ವಿವರಿಸಬೇಕು ಎಂದು ಆಗ್ರಹಿಸಿದರು.

ಕೃಷಿ ಭೂಮಿ ರೈತರಲ್ಲಿಯೇ ಉಳಿಯಬೇಕು. ಬಂಡವಾಳದಾರರು, ಉದ್ಯಮಿಗಳು, ವ್ಯಾಪಾರಸ್ಥರು, ರೈತರಲ್ಲದವರು, ಭೂಮಿ ಖರೀದಿ ಮಾಡಬಾರದು ಎಂದು ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 2 ಲಕ್ಷ ರೂ.ಗಿಂತ ಹೆಚ್ಚು ಆದಾಯ ಇರುವವರು ಕೃಷಿ ಭೂಮಿ ಖರೀದಿಸಬಾರದು ಎಂದು ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದರು. ನಂತರ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 2 ಲಕ್ಷ ರೂ. ಆದಾಯ ಮಿತಿಯನ್ನು 25 ಲಕ್ಷ ರೂ.ಗೆ ಏರಿಕೆ ಮಾಡಿ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿದ್ದರು ಎಂದು ತಿಳಿಸಿದರು.

ಈಗ ರಾಜ್ಯ ಸರಕಾರ ಉದ್ಯಮಿಗಳು, ಹೆಚ್ಚು ಹೂಡಿಕೆ ಮಾಡುವ ಉದ್ದೇಶದಿಂದ ಭೂಮಿ ಖರೀದಿಯನ್ನು ಸರಳ ಮಾಡಲು ಭೂ ಸುಧಾರಣೆ ಕಾಯ್ದೆಯ ಸೆಕ್ಷನ್ 79 ಎ ಮತ್ತು ಬಿ ಅನ್ನು ಕಾಯ್ದೆಯಿಂದ ತೆಗೆದು ಹಾಕಲು ನಿರ್ಧರಿಸಿರುವುದಾಗಿ ಹಾಗೂ ಪ್ರಸ್ತುತ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸುವುದಾಗಿ ಹೇಳಿರುವುದು ರೈತ ಸಮುದಾಯಕ್ಕೆ ಬಿಜೆಪಿ ಸರಕಾರ ಮಾಡುತ್ತಿರುವ ದ್ರೋಹವಾಗಿದೆ ಎಂದು ಆರೋಪಿಸಿದರು.

ಈಗಾಗಲೇ ನೀರಾವರಿ, ರಸ್ತೆ ನಿರ್ಮಾಣ, ರೈಲು ಮಾರ್ಗ, ನಗರ ಪ್ರದೇಶಗಳಿಗೆ ಹಾಗೂ ಕೈಗಾರಿಕೆ ಪ್ರದೇಶಗಳಿಗೆ ಬಹಳಷ್ಟು ಕೃಷಿ ಭೂಮಿ ಬಳಸಲಾಗಿದೆ. ದಿನೇ ದಿನೆ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಈ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವುದರಿಂದ ರೈತರಿಗೆ ಅಲ್ಪಕಾಲದಲ್ಲಿ ಸ್ವಲ್ಪಹಣ ಹೆಚ್ಚಿಗೆ ಸಿಗುವುದೇ ವಿನಃ ರೈತರು ಕೃಷಿಯಿಂದ ಶಾಶ್ವತವಾಗಿ ದೂರವಾಗುತ್ತಾರೆ. ರೈತ ಕುಟುಂಬಗಳು ಬೀದಿಗೆ ಬರುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಭೂ ಸುಧಾರಣೆ ಕುರಿತು ವಿರೋಧ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಎಸ್.ಆರ್ ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಮಾಡಿರುವುದಲ್ಲದೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೂ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸ್ವರಾಜ್ ಇಂಡಿಯಾದ ರಾಜ್ಯಾಧ್ಯಕ್ಷ ಚಾಮರಾಸ ಮಾಲಿ ಪಾಟೀಲ್, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News