ರಾಜ್ಯದಲ್ಲಿ 14 ಕೊರೋನ ಪ್ರಕರಣ ದೃಢ: ಸಚಿವ ಡಾ.ಸುಧಾಕರ್

Update: 2020-03-18 14:36 GMT

ಬೆಂಗಳೂರು, ಮಾ.18: ಕೊರೋನ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಆರೋಗ್ಯದ ತುರ್ತು ಪರಿಸ್ಥಿತಿ ಎಂದು ಘೋಷಿಸಿದೆ. ಜನರು ಇದಕ್ಕಾಗಿ ಹೆದರುವ ಬದಲಾಗಿ ಇದನ್ನು ತಡೆಗಟ್ಟಲು ಎಲ್ಲರೂ ಸಮರೋಪಾದಿಯಲ್ಲಿ ಕೈ ಜೋಡಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.

ಬುಧವಾರ ವಿಧಾನಸಭೆಯಲ್ಲಿ ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ಇದುವರೆಗೆ 14 ಕೊರೋನ ಪ್ರಕರಣಗಳು ದೃಢಪಟ್ಟಿವೆ ಎಂದರು. ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಖಾಸಗಿ ಹಾಗೂ ಸರಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳು, ಹೊಟೇಲ್ ಮತ್ತು ರೆಸಾರ್ಟ್‌ಗಳನ್ನು ವಿದೇಶದಿಂದ ಆಗಮಿಸಿದ ಪ್ರಯಾಣಿಕರನ್ನು ಪ್ರತ್ಯೇಕವಾಗಿರಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಕೊರೋನ ಭಾದಿತ ರಾಜ್ಯಗಳ ಪೈಕಿ ಕರ್ನಾಟಕ ನಾಲ್ಕನೆ ಸ್ಥಾನದಲ್ಲಿದೆ. ಈಗಾಗಲೆ 104 ಸಹಾಯವಾಣಿ ಆರಂಭಿಸಲಾಗಿದೆ. 42,500 ಜನ ವಿವಿಧ ದೇಶಗಳಿಂದ ಬೆಂಗಳೂರಿಗೆ ಬಂದಿದ್ದಾರೆ. ಅವರ ಬಗ್ಗೆ ಸಮಗ್ರ ಮಾಹಿತಿ ಪಡೆದು ಆರೋಗ್ಯ ಸ್ಥಿತಿಗತಿಯ ಬಗ್ಗೆ ಪರಾಮರ್ಶೆ ಮಾಡಲಾಗಿದೆ ಎಂದು ಸುಧಾಕರ್ ತಿಳಿಸಿದರು.

ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಅಧಿವೇಶನ ವೀಕ್ಷಿಸಲು ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ. ವಿದೇಶಗಳಿಂದ ಆಗಮಿಸುವ ಪ್ರಯಾಣಿಕರ ಬಲಗೈ ಮೇಲೆ ಸ್ಟಾಂಪ್ ಹಾಕಲಾಗುತ್ತಿದೆ. ಅವರು ಕಡ್ಡಾಯವಾಗಿ 15 ದಿನ ಯಾರ ಸಂಪರ್ಕದಲ್ಲೂ ಇರದೆ ಪ್ರತ್ಯೇಕವಾಗಿ ವಾಸಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ನಮ್ಮ ರಾಜ್ಯಕ್ಕೆ ಆರ್ಥಿಕವಾಗಿ ಸಂಕಷ್ಟವಾದರೂ ಜನರ ಹಿತದೃಷ್ಟಿಯಿಂದ ಕೆಲವು ನಿರ್ಬಂಧನೆಗಳನ್ನು ಮುಂದುವರೆಸುವುದು ಅನಿವಾರ್ಯವಾಗಿದೆ. ಕೊರೋನ ಸೋಂಕು ತಗುಲಿರುವವರ ಪೈಕಿ ಹಲವಾರು ಮಂದಿ ಗುಣಮುಖರಾಗುತ್ತಿದ್ದಾರೆ. ಐಸೋಲೇಷನ್ ವಾರ್ಡ್‌ಗಳಲ್ಲಿ 15 ದಿನ ಕಳೆದಿರುವವರನ್ನು ಯಾವುದೆ ಸಮಸ್ಯೆ ಕಾಣಿಸಿಕೊಳ್ಳದೆ ಇದ್ದರೆ, ಅವರನ್ನು ವಾಪಸ್ ಕಳುಹಿಸಲಾಗುತ್ತಿದೆ ಎಂದು ಸುಧಾಕರ್ ಹೇಳಿದರು.

ವಿದೇಶದಿಂದ ಬಂದವರ ಮೇಲೆ ನಿಗಾ ಇಡಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. 42,500 ಮಂದಿಗೆ ಯಾಂತ್ರಿಕ ಕರೆಗಳ ಮೂಲಕ ಸಂಪರ್ಕಿಸಲಾಗಿದೆ. ಅವರ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಿ ಫೋನ್ ಮೂಲಕ ಆರೋಗ್ಯದ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಕೊರೋನ ಸೋಂಕು ನಿಯಂತ್ರಿಸಲು ಆರೋಗ್ಯ ಸೇವೆಯಲ್ಲಿ ತೊಡಗಿರುವವರನ್ನು ಯೋಧರೆಂದು ಶ್ಲಾಘಿಸಲಾಗುತ್ತಿದೆ. ಅವರಿಗೆ ಉಚಿತ ವಿಮೆ ಮತ್ತು ಸ್ವಲ್ಪ ಪ್ರಮಾಣದ ಭತ್ತೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ಮೂರು ವಾರಗಳನ್ನು ಗಂಭೀರವಾಗಿ ಪರಿಗಣಿಸಿ ಸೋಂಕು ನಿಗ್ರಹ ಮಾಡಿದರೆ ಆಪತ್ತಿನಿಂದ ಪಾರಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ ಎಂದು ಸುಧಾಕರ್ ಹೇಳಿದರು.

ಬಳಿಕ ಮಾತನಾಡಿದ ಕಾಂಗ್ರೆಸ್ ಸದಸ್ಯ ಯು.ಟಿ.ಖಾದರ್, ರೋಗ ಬಂದ ನಂತರ ಚಿಕಿತ್ಸೆಗಾಗಿ ಹಣ ಖರ್ಚು ಮಾಡುವುದು ಮುಖ್ಯ ಅಲ್ಲ. ರೋಗ ಬರದಂತೆ ತಡೆಯಲು ಪ್ರಯತ್ನ ಮಾಡಬೇಕು. ಅದಕ್ಕಾಗಿ, ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಬೇಕು ಎಂದರು.

ಕೊರೋನ ವೈರಸ್‌ಗೆ ನೀಡುತ್ತಿರುವ ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಸೇರಿಸಿದರೆ, ಖಾಸಗಿ ಆಸ್ಪತ್ರೆಗಳು ಸಹಕಾರ ಕೊಡುತ್ತವೆ. ಐಸೋಲೇಷನ್ ವಾರ್ಡ್‌ಗಳನ್ನು ಒಂದು ಆಸ್ಪತ್ರೆಯಲ್ಲಿ 10 ಹಾಸಿಗೆ ಕಾಯ್ದಿರಿಸಿದರೆ ಪ್ರಯೋಜನವಿಲ್ಲ. ಐಸೋಲೇಷನ್‌ಗಾಗಿ ಪ್ರತ್ಯೇಕವಾದ ಕಟ್ಟಡದಲ್ಲಿ ಮಾಡಬೇಕು ಎಂದು ಅವರು ಹೇಳಿದರು.

ಪ್ರವಾಸಿ ಸ್ಥಾನಗಳಿಗೆ ಯಾರೂ ಹೋಗಬಾರದು ಎಂದು ಸರಕಾರ ಆದೇಶ ಮಾಡಿದೆ. ಒಂದು ವೇಳೆ ಯಾರಾದರೂ ಹೋದರೆ ಅವರಿಗೆ ದಂಡ ಹಾಕಬೇಕು. ಅಲ್ಲದೇ, ವಿದೇಶಗಳಲ್ಲಿ ನಮ್ಮ ರಾಜ್ಯದ ಕೆಲವು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಅವರ ಸುರಕ್ಷತೆಗಾಗಿ ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಎಂದು ಖಾದರ್ ಹೇಳಿದರು.

ಕಾಂಗ್ರೆಸ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ವಿದೇಶದಿಂದ ಬರುವ ಎಲ್ಲ ಪ್ರಯಾಣಿಕರನ್ನು ಕೇವಲ ಸ್ಕ್ರೀನಿಂಗ್ ಪರೀಕ್ಷೆ ಅಷ್ಟೇ ಅಲ್ಲ, ಲ್ಯಾಬೋರೇಟರಿ ಟೆಸ್ಟ್‌ಗೂ ಒಳಪಡಿಸಬೇಕು. ಆಗ ಮಾತ್ರ ಸೋಂಕಿತರ ನಿಖರ ವಿವರ ಸಿಗುತ್ತದೆ. ಅಲ್ಲದೆ, ಕೇವಲ ಸರಕಾರಿ ಲ್ಯಾಬೋರೇಟರಿಗಳಲ್ಲಿ ಮಾತ್ರ ಪರೀಕ್ಷೆ ಮಾಡುವುದು ಬೇಡ. ಮಾನ್ಯತೆ ಹೊಂದಿರುವ ಖಾಸಗಿ ಲ್ಯಾಬೋರೇಟರಿಗಳಲ್ಲೂ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News