ಕೊರೋನ ಭೀತಿ: ಶುಕ್ರವಾರದ ಪ್ರಾರ್ಥನೆ ಅವಧಿ ಕಡಿತಕ್ಕೆ ರಾಜ್ಯದ ಮುಸ್ಲಿಮ್ ಮುಖಂಡರ ಸೂಚನೆ

Update: 2020-03-18 15:11 GMT

ಬೆಂಗಳೂರು, ಮಾ.18: ಕೊರೋನ ಸೋಂಕು ಹರಡುವ ಭೀತಿಯಿಂದಾಗಿ ಶುಕ್ರವಾರದ ಪ್ರಾರ್ಥನೆ ಅವಧಿಯನ್ನು 15-20 ನಿಮಿಷಗಳಲ್ಲಿ ಪೂರ್ಣಗೊಳಿಸುವಂತೆ ಇಮಾರತ್-ಎ-ಶರೀಅ ಮೂಲಕ ಸೂಚನೆ ನೀಡಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಎ.ಬಿ.ಇಬ್ರಾಹಿಮ್ ತಿಳಿಸಿದರು.

ಬುಧವಾರ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶುಕ್ರವಾರದಂದು ನಿರ್ವಹಿಸುವ ವಿಶೇಷ ಪ್ರಾರ್ಥನೆ ವೇಳೆ ಮಸೀದಿಗಳಲ್ಲಿ ಬಯಾನ್, ಖುತ್ಬಾ ಸೇರಿದಂತೆ ಇನ್ನಿತರ ಪ್ರಕ್ರಿಯೆಗಳಿಗೆ ಒಂದು ಗಂಟೆಗೂ ಹೆಚ್ಚು ಕಾಲ ವಿನಿಯೋಗಿಸಲಾಗುತ್ತದೆ ಎಂದರು.

ರಾಜ್ಯ ವಕ್ಫ್ ಬೋರ್ಡ್ ಅಧೀನದಲ್ಲಿ ಸುಮಾರು 35 ಸಾವಿರ ಸಂಸ್ಥೆಗಳ ಪೈಕಿ 10 ಸಾವಿರಕ್ಕೂ ಅಧಿಕ ಮಸೀದಿಗಳಿವೆ. ಪ್ರತಿದಿನ ಐದು ಬಾರಿ ನಮಾಝ್ ನಿರ್ವಹಿಸಲಾಗುತ್ತದೆ. ಕೊರೋನ ವೈರಸ್ ಹರಡುವ ಸಾಧ್ಯತೆಗಳಿರುವುದರಿಂದ ಹಲವಾರು ದೇಶಗಳಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮಲ್ಲಿಯೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಇಸ್ಲಾಮ್ ಧರ್ಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಆದುದರಿಂದ, ಮಸೀದಿಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಮನವಿ ಮಾಡಲಾಗಿದೆ. ಸಭೆ, ಸಮಾರಂಭಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಮುಂದೂಡುವಂತೆ ಸೂಚಿಸಲಾಗಿದೆ. ಕೊರೋನ ವೈರಸ್ ವಿರುದ್ಧ ರಾಜ್ಯ ಸರಕಾರ ಕೈಗೊಂಡಿರುವ ಕ್ರಮಗಳಿಗೆ ಎಲ್ಲ ವಕ್ಫ್ ಸಂಸ್ಥೆಗಳು ಕೈ ಜೋಡಿಸಬೇಕು ಎಂದು ಇಬ್ರಾಹಿಮ್ ಮನವಿ ಮಾಡಿದರು.

ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್ ಮಾತನಾಡಿ, ಅಮಿರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ಅಧ್ಯಕ್ಷತೆಯಲ್ಲಿ ಇಂದು ಬೆಳಗ್ಗೆ ನಗರದ ಪ್ರಮುಖ ಮೌಲಾನಗಳು, ವೈದ್ಯರು ಸಭೆ ನಡೆಸಿ ಕೊರೋನ ವೈರಸ್ ಹಿನ್ನೆಲೆಯಲ್ಲಿ ಎಲ್ಲ ಮಸೀದಿಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚಿಸಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದರು.

ಮಸೀದಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಸೀದಿಗಳಲ್ಲಿನ ವುಝು (ಅಂಗಸ್ನಾನ) ಮಾಡುವ ಸ್ಥಳದಲ್ಲಿ ಸಾಬೂನು ಹಾಗೂ ಹ್ಯಾಂಡ್ ವಾಷ್ ಸೌಲಭ್ಯ ಕಲ್ಪಿಸಬೇಕು. ಮಸೀದಿಗಳಲ್ಲಿ ಎಲ್ಲರೂ ಬಳಸುವಂತಹ ಟವಲ್ ಹಾಗೂ ಟೋಪಿಗಳನ್ನು ತೆರವು ಮಾಡಬೇಕೆಂದು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯ ಸರಕಾರವು ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿರುವಂತೆ ಮದ್ರಸಾ ಹಾಗೂ ಮಖ್ತಬ್‌ಗಳಿಗೂ ರಜೆ ಘೋಷಿಸಬೇಕು. ದರ್ಗಾಗಳಲ್ಲಿ ಜನ ಜಂಗುಳಿ ಸೇರಲು ಅವಕಾಶ ನೀಡಬಾರದು. ಅಲ್ಲದೆ, ರಾತ್ರಿ ಹೊತ್ತು ದರ್ಗಾ ಆವರಣದಲ್ಲಿ ಯಾರು ಕೂಡ ತಂಗಬಾರದು. ಈ ಬಗ್ಗೆ ಸಂಬಂಧಪಟ್ಟ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿನ್ನೆಯೇ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದರು.

ಇಜ್ತೆಮಾ ಹಾಗೂ ಉರೂಸ್‌ಗಳಲ್ಲೂ ಕಡಿಮೆ ಪ್ರಮಾಣದ ಜನ ಸೇರುವಂತೆ ಕ್ರಮ ಕೈಗೊಳ್ಳಬೇಕು. ಮಸೀದಿಗಳಲ್ಲಿ ಕಡ್ಡಾಯ(ಫರಝ್) ಪ್ರಾರ್ಥನೆ ನಿರ್ವಹಿಸಿದ ಬಳಿಕ ಸುನ್ನತ್ ಹಾಗೂ ನಫಿಲ್ ನಮಾಝ್‌ಗಳನ್ನು ತಮ್ಮ ಮನೆಗಳಲ್ಲಿ ನಿರ್ವಹಿಸುವುದು ಸೂಕ್ತ ಎಂದು ಮುಹಮ್ಮದ್ ಯೂಸುಫ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮೌಲಾನ ಮಖ್ಸೂದ್ ಇಮ್ರಾನ್ ರಶಾದಿ, ಮೌಲಾನ ಏಜಾಝ್ ಅಹ್ಮದ್ ನದ್ವಿ, ಮೌಲಾನ ಮುಹಮ್ಮದ್ ಝುಲ್ಫಿಖಾರ್ ನೂರಿ, ರಾಜ್ಯ ವಕ್ಫ್ ಬೋರ್ಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಸ್ಲಾಹುದ್ದೀನ್ ಗದ್ಯಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News