ಕೊರೋನ ನಿಯಂತ್ರಣಕ್ಕೆ 200 ಕೋಟಿ ರೂ.ಬಿಡುಗಡೆ: ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು, ಮಾ.18: ರಾಜ್ಯದಲ್ಲಿ ಕೊರೋನ ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ವಿಶೇಷ ಟಾಸ್ಕ್‌ಫೋರ್ಸ್ ರಚಿಸಲಾಗಿದ್ದು, ಕೊರೋನದಿಂದ ಎದುರಾಗಬಹುದಾದ ತುರ್ತು ಪರಿಸ್ಥಿತಿ ನಿರ್ವಹಿಸಲು 200 ಕೋಟಿ ರೂ.ಮೀಸಲಿರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಬುಧವಾರ ವಿಧಾನಸೌಧದಲ್ಲಿ ಕೊರೋನ ವಿಚಾರಕ್ಕೆ ಸಂಬಂಧಿಸಿದಂತೆ ನಡೆಸಿದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ವಿಧಾನಸಭೆಯಲ್ಲಿ ಅವರು ಮಾಹಿತಿ ನೀಡಿದರು.
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ, ಆರೋಗ್ಯ ಸಚಿವ ಬಿ.ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು ಟಾಸ್ಕ್‌ಫೋರ್ಸ್‌ನಲ್ಲಿರುತ್ತಾರೆ ಎಂದು ಅವರು ಹೇಳಿದರು.
ಟಾಸ್ಕ್‌ಫೋರ್ಸ್ ಪ್ರತಿದಿನ ಸೇರಿ ಸರಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜನರಿಗೆ ತಿಳಿಸುವುದಲ್ಲದೆ, ದಿನಕ್ಕೆರಡು ಬಾರಿ ಬುಲೆಟಿನ್ ಬಿಡುಗಡೆ ಮಾಡಲಿದೆ. ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬಂದ ಪ್ರಯಾಣಿಕರನ್ನು ಪ್ರತ್ಯೇಕವಾಗಿರಿಸಲು ಕ್ರಮ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ವಿಧಾನಸೌಧ, ವಿಕಾಸಸೌಧಕ್ಕೆ ಜನ ಬಾರದಂತೆ ನಿಷೇಧ ಹೇರಲಾಗಿದೆ. ರಾಜ್ಯದಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರ, ಮಂಗನ ಕಾಯಿಲೆಯನ್ನು ನಿಗ್ರಹ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಯಡಿಯೂರಪ್ಪ ಹೇಳಿದರು. ಶಾಪಿಂಗ್ ಮಾಲ್‌ಗಳು, ಸಿನಿಮಾ ಮಂದಿರಗಳು ಹಾಗೂ ಇತರೆ ಜನನಿಬಿಡ ಸಂಕೀರ್ಣಗಳನ್ನು ಮುಚ್ಚಲು ಕಳೆದ ವಾರ ಹೊರಡಿಸಿದ್ದ ಆದೇಶ ಮಾ.31ರವರೆಗೂ ಮುಂದುವರೆಯಲಿದೆ. ಹಾಗೆಯೆ ಶಾಲಾ-ಕಾಲೇಜುಗಳ ರಜೆಯೂ ಮುಂದುವರೆದಿದೆ. ಜಾತ್ರೆ, ಮದುವೆ ಕಾರ್ಯಕ್ರಮಗಳಲ್ಲಿ 200ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ಅವರು ತಿಳಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೊರೋನ ತಡೆಯುವ ನಿಟ್ಟಿನಲ್ಲಿ ಸರಕಾರ ಕೈಗೊಳ್ಳುವ ತೀರ್ಮಾನಕ್ಕೆ ನಮ್ಮ ಸಹಕಾರವಿದೆ. ಸರಕಾರ ರಚಿಸಿರುವ ಟಾಸ್ಕ್‌ಫೋರ್ಸ್ ಪ್ರತಿ ದಿನ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಕೊರೋನ ನಮ್ಮ ರಾಜ್ಯದ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಬೀರಲಿದೆ. ಈ ಬಗ್ಗೆಯೂ ಸರಕಾರ ಎಚ್ಚರ ವಹಿಸಬೇಕಿದೆ ಎಂದರು.
ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲೂ ವೆಂಟಿಲೇಟರ್ ವ್ಯವಸ್ಥೆ ಮಾಡಬೇಕು. ಖಾಸಗಿ ಆಸ್ಪತ್ರೆಗಳಲ್ಲೂ ಕೊರೋನ ಪೀಡಿತ ರೋಗಿಗಳನ್ನು ಸೇರಿಸಿಕೊಳ್ಳಬೇಕು. ಇವರ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರಕಾರವೆ ಭರಿಸಬೇಕು ಎಂದು ಆಗ್ರಹಿಸಿದರು.