ಪೊಲೀಸರು ಸಂವಿಧಾನ ಬದ್ಧವಾಗಿ ನಡೆದುಕೊಳ್ಳಬೇಕು, ಬಿಜೆಪಿ ಕಾರ್ಯಕರ್ತರಂತೆ ಅಲ್ಲ: ಡಿಕೆಶಿ
ಬೆಂಗಳೂರು, ಮಾ. 18: ಮಧ್ಯಪ್ರದೇಶ ಶಾಸಕರು ಉಳಿದುಕೊಂಡಿರುವ ರೆಸಾರ್ಟ್‌ನಲ್ಲಿ ಕಾರಣವಿಲ್ಲದೆ ನಮಗೆ ಪ್ರವೇಶ ನಿರಾಕರಿಸಲಾಗಿದೆ. ಪೊಲೀಸರು ಸಂವಿಧಾನ ಬದ್ಧವಾಗಿ ನಡೆದುಕೊಳ್ಳಬೇಕೆ ಹೊರತು, ಬಿಜೆಪಿ ಕಾರ್ಯಕರ್ತರಂತೆ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ರಾಜ್ಯಸಭೆ ಅಭ್ಯರ್ಥಿ ದಿಗ್ವಿಜಯ್ ಸಿಂಗ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಮುಖಂಡರ ಸಭೆ ಬಳಿಕ ಮಾತನಾಡಿದ ಅವರು, ದಿಗ್ವಿಜಯ್ ಸಿಂಗ್ ಆ ರಾಜ್ಯದ ಶಾಸಕರನ್ನು ಭೇಟಿ ಮಾಡಲು ಬಂದಿದ್ದಾರೆ. ಅವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದು, ಅವರ ಶಾಸಕರ ಬಳಿ ಮತ ಕೇಳಲು ಅವರಿಗೆ ಅಧಿಕಾರವಿದೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಾಗಿಲ್ಲ. ಆದರೆ ಪೊಲೀಸರು ಅವರನ್ನು ತಡೆದು, ಹಕ್ಕನ್ನು ಕಸಿದುಕೊಂಡಿದ್ದಾರೆಂದು ಟೀಕಿಸಿದರು.
ಶಾಸಕರ ಭೇಟಿಗೆ ಅವಕಾಶ ನೀಡುವಂತೆ ಪೊಲೀಸ್ ಆಯುಕ್ತ, ಡಿಜಿಗೂ ಮನವಿ ಮಾಡಿದ್ದೇವೆ. ಭೇಟಿಗೆ ಅವಕಾಶ ನೀಡದಿರಲು ಏನಾದರೂ ಕಾನೂನು ಇದೆಯೇ? ಮಧ್ಯಪ್ರದೇಶ ಶಾಸಕರು ತಮಗೆ ರಕ್ಷಣೆ ಬೇಕೆಂದು ಕೇಳಿದ್ದಾರೆಯೇ ಹೊರತು, ತಾವು ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ಹೇಳಿಲ್ಲ. ರೆಸಾರ್ಟ್‌ನಲ್ಲಿ ಬರೀ ಬಿಜೆಪಿಯವರಷ್ಟೇ ಇರಬಹುದೇ? ಎಂದು ಪ್ರಶ್ನಿಸಿದರು.
ಅಲ್ಲಿರುವ ಶಾಸಕರನ್ನು ಖಾಲಿ ಮಾಡಿಸಿ ಎಂದು ನಾವು ಒತ್ತಾಯಿಸಿದ್ದೇವೆ. ಆದರೆ ಈಗ ಒಂದೊಂದೇ ವಿಡಿಯೋ ಬಿಡಲು ಆರಂಭಿಸಿದ್ದು, ರೆಸಾರ್ಟ್‌ನಲ್ಲಿರುವ ಶಾಸಕರು ತಮಗೆ ಭದ್ರತೆ ನೀಡುವಂತೆ ಪತ್ರ ನೀಡಿದ್ದಾರೆ. ಆದರೆ, ನಮಗೆ ರೆಸಾರ್ಟ್ ಒಳಗೆ ಬಿಡುತ್ತಿಲ್ಲ. ಶಾಸಕರನ್ನು ಖಾಲಿ ಮಾಡಿಸದಿದ್ದರೆ ನಾವು ನಮ್ಮ ರಾಜಕಾರಣ ಮಾಡಬೇಕಾಗುತ್ತದೆ ಎಂದು ಹೇಳಿದ್ದೇವೆ ಎಂದರು.
ಮತ ಕೇಳಲು ಹೋಗಿದ್ದೆ; ಸಿಂಗ್
‘ನಾವು ಬಿಜೆಪಿಯವರಂತೆ ಕುದುರೆ ವ್ಯಾಪಾರಕ್ಕಾಗಿ ರೆಸಾರ್ಟ್‌ಗೆ ಹೋಗಿರಲಿಲ್ಲ. ನಮ್ಮ ಶಾಸಕರು ಅಲ್ಲಿದ್ದರು, ಅವರನ್ನು ಭೇಟಿ ಮಾಡಿ ಮತ ಕೇಳಲು ಹೋಗಿದ್ದೆ. ಆದರೆ ನಮಗೆ ರೆಸಾರ್ಟ್ ಒಳಗೆ ಬಿಡಲಿಲ್ಲ, ನಮ್ಮನ್ನು ಬಂಧಿಸಿದರು. ಈ ರೀತಿ ಬಂಧಿಸಲು ಅವಕಾಶ ಕೊಟ್ಟವರು ಯಾರು? ಎಂದು ದಿಗ್ವಿಜಯ್ ಸಿಂಗ್ ಪ್ರಶ್ನಿಸಿದರು.
ಅಮಿತ್ ಶಾ, ಮೋದಿ ನಿರ್ದೇಶನದ ಮೇಲೆ ಇದೆಲ್ಲ ನಡೆಯುತ್ತಿದೆ. ಬಿಜೆಪಿ ಪ್ರಜಾತಂತ್ರ ಮೌಲ್ಯವನ್ನು ಹಾಳು ಮಾಡುತ್ತಿದೆ. ಈ ಶಾಸಕರಿಗೆ ವಿಮಾನದ ಟಿಕೆಟ್ ಬುಕ್ ಮಾಡಿದ್ದ ಬಿಜೆಪಿ, ಹೊಟೇಲ್‌ನಲ್ಲಿ ಕೊಠಡಿ ವ್ಯವಸ್ಥೆ ಕಲ್ಪಿಸಿರುವುದು ಬಿಜೆಪಿ. ಎಲ್ಲವನ್ನೂ ಬಹಿರಂಗವಾಗಿಯೇ ಮಾಡುತ್ತಿದ್ದಾರೆಂದು ಟೀಕಿಸಿದರು.
ನಮ್ಮ ಶಾಸಕರಿದ್ದ ಸಾರ್ವಜನಿಕ ಸ್ಥಳಕ್ಕೆ ಹೋದರೆ ತಡೆದಿದ್ದು ಯಾಕೆ? ಸಾರ್ವಜನಿಕ ಸ್ಥಳಕ್ಕೆ ಅಷ್ಟೊಂದು ಪೊಲೀಸರನ್ನ ಹಾಕಿರೋದು ಯಾಕೆ? ಸಿಎಂ ಯಡಿಯೂರಪ್ಪ ಆದೇಶದಿಂದ ತಾನೇ ಈ ಭದ್ರತೆ? ಶಾಸಕರನ್ನ ಖರೀದಿಸುತ್ತಿರುವುದಕ್ಕೆ ಇನ್ನೇನು ಸಾಕ್ಷಿ ಬೇಕು? ಎಂದು ಅವರು ವಾಗ್ದಾಳಿ ನಡೆಸಿದರು.
ದೇಶದಲ್ಲಿ ಕೊರೋನ ವೈರಸ್ ಸೋಂಕುನಿಂದಾಗಿ ಇಂದು ತಲ್ಲಣ ಮೂಡಿಸಿದೆ. ಈ ಬಗ್ಗೆ ಗಮನಹರಿಸಲು ಪ್ರಧಾನಿ ಮೋದಿಗೆ ಬಿಡುವಿಲ್ಲ. ಆದರೆ, ಶಾಸಕರ ಖರೀದಿಯಲ್ಲಿ ಬಿಜೆಪಿ ಮುಖಂಡರು ಮುಂದಾಗಿದ್ದು, ಪ್ರಜಾಪ್ರಭುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬಂದ ಮಧ್ಯಪ್ರವೇಶ ಸರಕಾರವನ್ನು ಉರುಳಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.