'ಪೆಟ್ರೋಲ್ ಬಂಕ್ ಬಂದ್' ವದಂತಿ: ವಾಹನ ಸವಾರರಲ್ಲಿ ಆತಂಕ
Update: 2020-03-18 22:44 IST
ಕಲಬುರಗಿ, ಮಾ.18: ಕೊರೋನ ವೈರಸ್ ಹಬ್ಬುತ್ತಿರುವುದರಿಂದ ನಗರದ ಎಲ್ಲ ಪೆಟ್ರೋಲ್ ಬಂಕ್‌ಗಳನ್ನು ಬುಧವಾರದಿಂದ (ಮಾ.18) ಬಂದ್ ಮಾಡಲಾಗುತ್ತಿದೆ ಎಂಬ ವದಂತಿಯಿಂದಾಗಿ ವಾಹನ ಸವಾರರು ಕೆಲಕಾಲ ಆತಂಕಕ್ಕೆ ಒಳಗಾದ ಸಂದರ್ಭ ಸೃಷ್ಟಿಯಾಗಿತ್ತು.
ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೊರೋನ ವೈರಸ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಪೆಟ್ರೋಲ್ ಬಂಕ್ ಬಂದ್ ಮಾಡಲಾಗುತ್ತದೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಬ್ಬಿಸಲಾಗಿತ್ತು. ಇದನ್ನೇ ಸತ್ಯವೆಂದು ತಿಳಿದ ವಾಹನ ಸವಾರರು ಬುಧವಾರ ಬೆಳಗ್ಗಿನಿಂದಲೇ ಪೆಟ್ರೋಲ್ ಬಂಕ್ ಮುಂದೆ ಸಾಲುಗಟ್ಟಿ ನಿಂತ ದೃಶ್ಯ ಸಾಮಾನ್ಯವಾಗಿತ್ತು.
ಸ್ಪಷ್ಟನೆ: ಪೆಟ್ರೋಲ್ ಬಂಕ್ ಮುಂದೆ ವಾಹನ ದಟ್ಟಣೆ ಕಂಡ ಜಿಲ್ಲಾಧಿಕಾರಿ ಶರತ್, ಸಾರಿಗೆ, ಕಿರಾಣಿ ಅಂಗಡಿಗಳು, ಮೆಡಿಕಲ್ ಶಾಪ್, ಪೆಟ್ರೋಲ್ ಪಂಪ್, ಸಾರಿಗೆ, ಆಸ್ಪತ್ರೆ ಸೇವೆಗಳಂತಹ ಅತ್ಯವಶ್ಯ ಸೇವೆಗಳನ್ನು ಬಂದ್ ಮಾಡುವುದಿಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಬಾರದೆಂದು ಮನವಿ ಮಾಡಿದರು.