×
Ad

ಕೊರೋನ ಭೀತಿ: ಇನ್ನೂ ಒಂದು ವಾರ ಚಿತ್ರೋದ್ಯಮ ಬಂದ್

Update: 2020-03-18 23:10 IST

ಬೆಂಗಳೂರು, ಮಾ.18: ಕೊರೋನ ವೈರಸ್ ಭೀತಿ ಹೆಚ್ಚುತ್ತಲೇ ಇರುವುದರಿಂದ ಇನ್ನೂ ಒಂದು ವಾರ ಚಿತ್ರೋದ್ಯಮ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನ ಭೀತಿ ಹೆಚ್ಚುತ್ತಲೇ ಇರುವುದರಿಂದ ಚಿತ್ರಮಂದಿರಗಳನ್ನು ಇನ್ನೂ ಒಂದು ವಾರ ಬಂದ್ ಮಾಡುವಂತೆ ಸರಕಾರ ಆದೇಶಿಸಿದೆ. ಸರಕಾರದ ಆದೇಶಕ್ಕೆ ನಾವು ಬದ್ಧರಾಗಿದ್ದೇವೆ. ಇನ್ನೂ ಒಂದು ವಾರ ಎಲ್ಲ ಚಿತ್ರಮಂದಿರಗಳು, ಮಾಲ್ ಗಳಲ್ಲಿರುವ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು ಬಂದ್ ಮಾಡಲಾಗುತ್ತದೆ. ಈ ಕುರಿತು ಚಿತ್ರಮಂದಿರಗಳ ಮಾಲಕರಿಗೆ ಮಾಹಿತಿ ರವಾನಿಸುತ್ತೇವೆ ಎಂದು ಹೇಳಿದರು.

ಸ್ಟುಡಿಯೋ ಒಳಗಡೆ ನಡೆಯುವಂತಹ ನಾಲ್ಕೈದು ಮಂದಿ ಕುಳಿತು ಮಾಡುವಂತಹ ಕೆಲಸಗಳನ್ನು ಮಾತ್ರ ನಿರ್ವಹಿಸಲಾಗುತ್ತದೆ. ಉಳಿದಂತೆ ಒಳಾಂಗಣ, ಹೊರಾಂಗಣ ಚಿತ್ರೀಕರಣ ಸೇರಿದಂತೆ ಎಲ್ಲವೂ ಬಂದ್ ಆಗಲಿದೆ ಎಂದು ತಿಳಿಸಿದರು.

ಚಿತ್ರೋದ್ಯಮ ಬಂದ್ ಆಗಿದ್ದರಿಂದ ಈಗಾಗಲೇ ಬಹಳಷ್ಟು ನಷ್ಟವಾಗಿದೆ. ಇನ್ನೂ ಒಂದು ವಾರ ಬಂದ್ ಆಗುವುದರಿಂದ 100 ಕೋಟಿ ರೂ.ಗೂ ಅಧಿಕ ನಷ್ಟವಾಗಲಿದೆ. ಅಲ್ಲದೆ, ಇದನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿರುವವರಿಗೆ ಬಹಳ ತೊಂದರೆಯಾಗಲಿದೆ. ಚಲನಚಿತ್ರ ಕಾರ್ಮಿಕರಿಗೆ, ದಿನಗೂಲಿ ಕಾರ್ಮಿಕರಿಗೆ ಅಲ್ಲದೆ ಕೋಟ್ಯಂತರ ರೂ. ಬಂಡವಾಳ ಹಾಕಿ ನಿರ್ಮಿಸಿರುವ ಚಿತ್ರಗಳು ಪ್ರದರ್ಶನಗೊಳ್ಳದೆ ಇರುವುದರಿಂದ ಇಡೀ ಚಿತ್ರೋದ್ಯಮಕ್ಕೆ ಭಾರೀ ಹೊಡೆತ ಬೀಳಲಿದೆ. ಆದರೂ ಕೊರೋನ ಭೀತಿ ಹಿನ್ನೆಲೆಯಲ್ಲಿ ಸರಕಾರದ ಆದೇಶವನ್ನು ಪಾಲಿಸುತ್ತೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News