ಟಿಪ್ಪು ಜಯಂತಿ ರದ್ದು ಆದೇಶ ಬಗ್ಗೆ ಮುಂದಿನ ವಿಚಾರಣೆ ವೇಳೆ ಮಾಹಿತಿ: ಹೈಕೋರ್ಟ್‌ಗೆ ಹೇಳಿಕೆ

Update: 2020-03-18 17:50 GMT

ಬೆಂಗಳೂರು, ಮಾ.18: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ನಿಷೇಧಿಸಿ 2019ರ ಜು.30ರಂದು ಹೊರಡಿಸಿದ ಆದೇಶಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ಟಿಪ್ಪು ಜಯಂತಿ ಆಚರಣೆ ನಿಷೇಧಕ್ಕೆ ತೀರ್ಮಾನ ಕೈಗೊಳ್ಳಲಾಗಿದ್ದು, ಮುಂದಿನ ವಿಚಾರಣೆ ವೇಳೆ ಇದರ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೈಕೋರ್ಟ್‌ಗೆ ರಾಜ್ಯ ಸರಕಾರದ ಪರ ವಕೀಲರು ಮಾಹಿತಿ ನೀಡಿದ್ದಾರೆ. 

ರಾಜ್ಯ ಸರಕಾರದ ಆದೇಶ ರದ್ದುಪಡಿಸುವಂತೆ ಕೋರಿ ಉತ್ತರಪ್ರದೇಶದ ಲಕ್ನೋ ನಿವಾಸಿ ಬಿಲಾಲ್ ಆಲಿ ಷಾ, ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಮತ್ತು ಟಿಪ್ಪು ರಾಷ್ಟ್ರೀಯ ಸೇವಾ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಸರಕಾರದ ಪರ ವಾದಿಸಿದ ವಕೀಲ ವಿಕ್ರಂ ಹುಯಿಲಗೋಳ್ ಅವರು, ಟಿಪ್ಪು ಜಯಂತಿ ಆಚರಣೆ ನಿಷೇಧಕ್ಕೆ ರಾಜ್ಯ ಸರಕಾರ ಈಗಾಗಲೇ ತೀರ್ಮಾನ ಕೈಗೊಂಡಿದ್ದು, ಮುಂದಿನ ವಿಚಾರಣೆ ವೇಳೆ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಪೀಠಕ್ಕೆ ತಿಳಿಸಿದರು.

ಪ್ರಕರಣವೇನು: ಟಿಪ್ಪು ಜಯಂತಿ ಆಚರಣೆ ನಿಷೇಧಿಸಿ ರಾಜ್ಯ ಸರಕಾರ 2019ರ ಜು.30ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಣೆ ನಿಷೇಧ ಮಾಡುವಾಗ ಹಿಂದಿನ ಸರಕಾರ ಹೊರಡಿಸಿದ್ದ ಆದೇಶದ ಎಲ್ಲ ಅಂಶಗಳನ್ನು ಪರಿಗಣಿಸಿಲ್ಲ. ಹೀಗಾಗಿ, ಸರಕಾರ ಈಗಿನ ತನ್ನ ನಿರ್ಧಾರವನ್ನು ಎರಡು ತಿಂಗಳಲ್ಲಿ ಮರು ಪರಿಶೀಲಿಸಬೇಕೆಂದು 2019 ನ.6ರಂದು ನಿರ್ದೇಶನ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News