×
Ad

ಭ್ರಷ್ಟಾಚಾರಕ್ಕಾಗಿ ಕೊರೋನ ನೆಪದಲ್ಲಿ 200 ಕೋಟಿ ರೂ. ಬಿಡುಗಡೆ: ಬಿಜೆಪಿ ಮಾಜಿ ಶಾಸಕ ಬಗಲಿ

Update: 2020-03-19 19:47 IST

ವಿಜಯಪುರ, ಮಾ.19: ರಾಜ್ಯದಲ್ಲಿ ಆರೋಗ್ಯ ಇಲಾಖೆ ಸತ್ತು ಹೋಗಿದೆ. ಉತ್ತರ ಕರ್ನಾಟಕದಲ್ಲಿ ಕೊರೋನ ತಪಾಸಣೆಗೆ ಒಂದು ಲ್ಯಾಬ್ ತೆರೆಯದ ಸರಕಾರ 200 ಕೋಟಿ ರೂ. ಬಿಡುಗಡೆ ಮಾಡಿದ್ದು, ಭ್ರಷ್ಟಾಚಾರಕ್ಕಾಗಿ ಹೊರತು ರೋಗಿಗಳ ಉದ್ಧಾರಕ್ಕಾಗಿ ಅಲ್ಲ ಎಂದು ಬಿಜೆಪಿ ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಆರೋಪಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಸಚಿವ ಬಿ.ಶ್ರೀರಾಮುಲು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕೊರೋನ ತಪಾಸಣೆ ಲ್ಯಾಬ್ ತೆರೆಯಲಾಗುವುದು ಎಂದು ಹೇಳಿದ್ದಾರೆ. ಆದರೆ, ಈವರೆಗೆ ಉತ್ತರ ಕರ್ನಾಟಕದಲ್ಲಿ ಒಂದೂ ಲ್ಯಾಬ್ ತೆರೆದಿಲ್ಲ. ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ 13 ಕೋಟಿ ರೂ. ಖರ್ಚು ಮಾಡಿ 2 ಲ್ಯಾಬ್ ತೆರೆದಿದ್ದಾರೆ. ಹಾಸನ, ಮೈಸೂರು ಮತ್ತು ಶಿವಮೊಗ್ಗದಲ್ಲಿ ಲ್ಯಾಬ್ ತೆರೆದಿದ್ದಾರೆ. ಆದರೆ, ಕೊರೋನದಿಂದ ಮೊದಲ ವ್ಯಕ್ತಿ ಬಲಿಯಾದ ಕಲಬುರಗಿಯಲ್ಲಿ ಈವರೆಗೂ ಯಾಕೆ ಲ್ಯಾಬ್ ತೆರೆದಿಲ್ಲ. ಉತ್ತರ ಕರ್ನಾಟಕ ಸತ್ತು ಹೋಗಿದೆಯಾ? ಐದರಲ್ಲಿ ಉತ್ತರ ಕರ್ನಾಟಕಕ್ಕೆ ಒಂದೂ ಲ್ಯಾಬ್ ಇಲ್ಲದಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಕೊರೋನ ನಿಯಂತ್ರಣ ಮತ್ತು ಚಿಕಿತ್ಸೆಗೆ ಸರಕಾರ 200 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ, ಈ ಹಣದಲ್ಲಿ ಅಪರಾ-ತಪರಾ ನಡೆಯುತ್ತದೆ. ಕಡಿಮೆ ಬೆಲೆಯ ಸಲಕರಣೆ ಖರೀದಿಸಿ ಹೆಚ್ಚಿನ ಬಿಲ್ ಪಾವತಿಸುತ್ತಾರೆ. ಇದನ್ನು ನಾನು ಚೆನ್ನಾಗಿ ಬಲ್ಲೆ. ಈ 200 ಕೋಟಿ ರೂ. ಖರ್ಚಿಗೆ ಯಾವ ಕ್ರಿಯಾ ಯೋಜನೆ ರೂಪಿಸಿದ್ದಾರೆ ಎಂದು ಪ್ರಶ್ನಿಸಿದರು.

ಆಯುಷ್ಮಾನ್ ಭಾರತ ಯೋಜನೆಯಡಿ ಸರಕಾರ ಖಾಸಗಿ ಆಸ್ಪತ್ರೆಗಳಿಗೆ 23 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಆ ಆಸ್ಪತ್ರೆಗಳಿಗೆ ಮೊದಲು ಹಣ ಪಾವತಿ ಮಾಡಿ. ಹೆಚ್ಚುವರಿಯಾಗಿ 20 ಕೋಟಿ ರೂ. ಬಿಡುಗಡೆ ಮಾಡಿ. ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ನಿರ್ವಹಣೆಗೆ ಸಾಕಷ್ಟು ಸಿಬ್ಬಂದಿಯಿದ್ದಾರೆ. ಆದರೆ, ಸರಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಿರ್ವಹಣೆಗೆ ಯಾವ ತಂತ್ರಜ್ಞರಿದ್ದಾರೆ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News