ಬೆಂಗಳೂರಿನಿಂದ ಮಡಿಕೇರಿಗೆ 'ರಾಜಹಂಸ'ದಲ್ಲಿ ತೆರಳಿದ್ದ ಕೊರೋನ ಪೀಡಿತ

Update: 2020-03-19 15:15 GMT

►ಕೊಡಗು ಜಿಲ್ಲೆಯಲ್ಲಿ 144(3) ಸೆಕ್ಷನ್ ಜಾರಿ ►ಕೊಂಡಂಗೇರಿ ಗ್ರಾಮದ ಸಂಪರ್ಕ ನಿರ್ಬಂಧ

ಮಡಿಕೇರಿ, ಮಾ.19: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಹೋಬಳಿ ಕೊಂಡಗೇರಿಯ ಒಬ್ಬರಿಗೆ (35) ಕೊರೋನ ವೈರಸ್ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊರೋನ ಮುನ್ನೆಚ್ಚರಿಕಾ ಕ್ರಮಗಳನ್ನು ಮತ್ತಷ್ಟು ಪ್ರಬಲಗೊಳಿಸಿರುವುದಾಗಿ ತಿಳಿಸಿದರು. ಕೊಂಡಂಗೇರಿಯ ವ್ಯಕ್ತಿಯೊಬ್ಬರು ದುಬೈನಿಂದ ಬೆಂಗಳೂರಿಗೆ ಮಾ.15 ರಂದು ಇಂಡಿಗೋ ವಿಮಾನದಲ್ಲಿ ಆಗಮಿಸಿದ್ದಾರೆ. ನಂತರ ಬೆಂಗಳೂರಿನಿಂದ ಮೈಸೂರು ಮಾರ್ಗ ರಾಜಹಂಸ ಬಸ್ ಮೂಲಕ ಮೂರ್ನಾಡಿಗೆ ಆಗಮಿಸಿ ಬಳಿಕ ಆಟೋ ಮೂಲಕ ಮನೆ ತಲುಪಿದ್ದಾರೆ. ನಂತರ ಕೆಮ್ಮು, ನೆಗಡಿ ಲಕ್ಷಣ ಕಂಡು ಬಂದಿದ್ದು, ಮಾರ್ಚ್ 17 ರಂದು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಸಂದರ್ಭ ಶಂಕಿತರ ರಕ್ತ ಪರೀಕ್ಷೆಯನ್ನು ಮೈಸೂರಿಗೆ ಕಳುಹಿಸಿ ಕೊಡಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಕೊರೋನ ವೈರಸ್ ಪಾಸಿಟಿವ್ ಇದೆ ಎಂದು ಮಾ.19 ರಂದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.  

ಕೊರೋನ ವೈರಸ್ ಸೋಂಕಿತ ವ್ಯಕ್ತಿಯನ್ನು ವಿಶೇಷ ವಾರ್ಡ್‍ನಲ್ಲಿ ಚಿಕಿತ್ಸೆಗೆ ದಾಖಲು ಮಾಡಿಕೊಂಡಿದ್ದು, ಇವರು ಪ್ರಯಾಣಿಸಿದ ವಿಮಾನ ಮತ್ತು ಬಸ್ಸಿನಲ್ಲಿದ್ದ ಇತರೆ ಪ್ರಯಾಣಿಕರ ವಿವರವನ್ನು ಕಲೆ ಹಾಕಲಾಗುತ್ತಿದೆ. ಬಸ್‍ನಲ್ಲಿ ಬರುವಾಗ ಮೈಸೂರು ಮಾರ್ಗದಲ್ಲಿ ಊಟಕ್ಕೆ ನಿಲ್ಲಿಸಿದ ಸ್ಥಳ ಮತ್ತಿತರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕುಟುಂಬಗಳ ಸಂಪರ್ಕಕ್ಕೆ ನಿರ್ಬಂಧ

ಕೊಂಡಂಗೇರಿ ಗ್ರಾಮದಲ್ಲಿ 75 ಕುಟುಂಬಗಳಿದ್ದು, 306 ಜನರು ವಾಸಿಸುವ 500 ಮೀಟರ್ ಪ್ರದೇಶವನ್ನು ಕಂಟೈನ್‍ಮೆಂಟ್ ವಲಯವೆಂದು ಹಾಗೂ 500 ಮೀಟರ್ ಹೊರತುಪಡಿಸಿ ಈ ಪ್ರದೇಶದಲ್ಲಿನ ಜನರು ಇತರೆ ಜನರೊಂದಿಗೆ ಸಂಪರ್ಕವನ್ನು ನಿರ್ಬಂಧಿಸಿದ್ದು, ಇವರಿಗೆ ಜಿಲ್ಲಾಡಳಿತವು ದಿನ ನಿತ್ಯದ ಅಗತ್ಯ ಊಟೋಪಚಾರ ವ್ಯವಸ್ಥೆ ಮಾಡಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. 

ಕೊರೋನ ವೈರಸ್ ಎದುರಿಸಲು ಮತ್ತು ತಡೆಗೆ, ಜಾಗೃತಿ ಮೂಡಿಸಲು ಜಿಲ್ಲಾಡಳಿತ ಸಿದ್ಧವಾಗಿದ್ದು, ಸಾರ್ವಜನಿಕರು ಸಹಕರಿಸಬೇಕಿದೆ. ಕೊರೋನ ವೈರಸ್ ಸೋಂಕಿತ ಒಂದು ಪ್ರಕರಣ ಜಿಲ್ಲೆಯಲ್ಲಿ ದಾಖಲಾದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ 100 ಹಾಸಿಗೆಯ ಐಸೊಲೇಟೆಡ್ ವಾರ್ಡ್, 50 ಹಾಸಿಗೆಯ  ಕೋರೆಂಟಲ್ ವಾರ್ಡ್ ಸಿದ್ಧವಾಗಿದ್ದು, ಕೊಡಗು ವೈದ್ಯಕೀಯ ಕಾಲೇಜಿನಲ್ಲಿ ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

144(3) ಸೆಕ್ಷನ್ ಜಾರಿ

ಮುಂಜಾಗ್ರತಾ ದೃಷ್ಟಿಯಿಂದ ಜಿಲ್ಲೆಯಲ್ಲಿ 144(3) ಸೆಕ್ಷನ್ ಕೂಡ ಜಾರಿಯಲ್ಲಿದ್ದು, ರೆಸಾರ್ಟ್, ಹೊಟೇಲ್, ಹೋಮ್ ಸ್ಟೇ ಬುಕಿಂಗ್ ರದ್ದು ಪಡಿಸುವುದು ಮತ್ತು ಹೊಸ ಬುಕ್ಕಿಂಗ್ ಮಾಡುವುದು ಸಂಪೂರ್ಣವಾಗಿ ಮಾರ್ಚ್ 31ರವರೆಗೆ ನಿಷೇಧಿಸಲಾಗಿದೆ. ಜಿಲ್ಲೆಯ ರೆಸಾರ್ಟ್‍ಗಳಲ್ಲಿ ಜರ್ಮನಿಯ ಇಬ್ಬರು, ಆಸ್ಟ್ರಿಯಾ ದೇಶದ ಒಬ್ಬ ಪ್ರಜೆಯೊಂದಿಗೆ ಭಾರತದ ಇಬ್ಬರು ಸ್ನೇಹಿತರು ನೆಲೆಸಿದ್ದು, ಮುಂಜಾಗೃತಾ ಕ್ರಮವಾಗಿ ಇವರನ್ನು ಉಳಿದುಕೊಂಡಿರುವ ರೆಸಾರ್ಟ್‍ನಲ್ಲಿಯೇ 15 ದಿನಗಳ ಕಾಲ ತಂಗಲು ಸೂಚನೆ ನೀಡಿರುವುದಾಗಿ ಜಿಲ್ಲಾಧಿಕಾರಿ ಹೇಳಿದರು.     

ವಿಶೇಷ ತಂಡ ರಚನೆ

ಕೊರೋನ ತಡೆಗೆ ಜಿಲ್ಲಾ ಮಟ್ಟದ ವಿಶೇಷ ತಂಡ ರಚನೆ ಮಾಡಲಾಗಿದ್ದು ಉಪ ವಿಭಾಗಾಧಿಕಾರಿ, ಐಟಿಡಿಪಿ ಇಲಾಖೆ ಅಧಿಕಾರಿ, ಕೃಷಿ ಇಲಾಖೆಯ ಉಪ ನಿರ್ದೇಶಕರನ್ನು ಮೇಲ್ವಿಚಾರಣೆಗಾಗಿ ನಿಯೋಜಿಸಲಾಗಿದೆ ಎಂದರು.

ಧಾರ್ಮಿಕ ಸ್ಥಳಗಳಲ್ಲಿ ದಿನ ನಿತ್ಯದ ಪೂಜಾ ಕೈಂಕರ್ಯಗಳಿಗೆ ಯಾವುದೇ ರೀತಿಯ ನಿರ್ಬಂಧವಿರುವುದಿಲ್ಲ. ಆದರೆ ದೊಡ್ಡ ಮಟ್ಟದ ಜಾತ್ರೆ, ಧಾರ್ಮಿಕ ಚಟುವಟಿಕೆಗಳು, ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದರು.

ಶಾಲಾ-ಕಾಲೇಜು ಅಂಗನವಾಡಿ, ಜಿಮ್, ಈಜುಕೊಳ, ಮೈದಾನ, ಮನೆಪಾಠ ಕೇಂದ್ರಗಳು ಮಾರ್ಚ್ 31ರ ವರೆಗೆ ಮುಚ್ಚಿರುತ್ತದೆ. ಎಲ್ಲಾ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಅನಗತ್ಯ ಭೇಟಿಯನ್ನು ನಿರ್ಬಂಧಿಸಿದ್ದು ಸಾರ್ವಜನಿಕರ ಅಗತ್ಯ ಕೆಲಸಗಳಿಗೆ ದೂರವಾಣಿ, ಇ-ಮೇಲ್, ವಾಟ್ಸ್ ಆಪ್, ಅಂಚೆ ಮೂಲಕ ಪತ್ರ ವ್ಯವಹಾರಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಆದುದರಿಂದ ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ ಮಾಡಿದರು.

ಸಂತೆ, ಜಾತ್ರೆ ಸೇರಿದಂತೆ ಜನ ಸೇರುವುದನ್ನು ನಿಷೇಧಿಸಲಾಗಿದ್ದು. ಜಿಲ್ಲೆಯ ಗಡಿಗಳಲ್ಲಿ ಚೆಕ್ ಫೋಸ್ಟ್ ತೆರೆದು ಪರಿಶೀಲನೆ ಮಾಡಲಾಗುತ್ತಿದೆ, ಔಷಧಿ, ದಿನಸಿ ತರಕಾರಿ ಹಾಗೂ ಇತರೆ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಹಕರಿಸುವುದು. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು ಸಾರ್ವಜನಿಕರಿಗೆ ಎಲ್ಲಾ ರೀತಿಯ ಅಗತ್ಯ ನೆರವು ನೀಡುವುದಾಗಿ ಜಿಲ್ಲಾಧಿಕಾರಿ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಹಾಜರಿದ್ದರು.

ಪ್ರಯಾಣಿಕರು ಪರೀಕ್ಷೆಗೆ ಒಳಪಡಿ

ಕೊಡಗಿನಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಬೆನ್ನಲ್ಲೆ ಈ ವ್ಯಕ್ತಿ ಪ್ರಯಾಣಿಸಿದ ಇಂಡಿಗೋ ವಿಮಾನ ಮತ್ತು ಕೆಎಸ್‍ಆರ್‍ಸಿಟಿ ರಾಜಹಂಸ ಬಸ್‍ನಲ್ಲಿ ಪ್ರಯಾಣಿಸಿರುವ ಎಲ್ಲರೂ ತಮ್ಮ ಮಾಹಿತಿಯನ್ನು ಅವರಿರುವ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ನೀಡಿ, ಪರೀಕ್ಷೆಗೆ ಒಳಗಾಗುವಂತೆ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ ಮಾಡಿದ್ದಾರೆ.

ಮಾ.15 ರಂದು ಸಂಜೆ 4.15ಕ್ಕೆ ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಬಂದ ವ್ಯಕ್ತಿ ಕೆಎಸ್‍ಆರ್‍ಟಿಸಿ ರಾಜಹಂಸ ಬಸ್ (ಕೆಎ19-ಎಫ್3170) ನಲ್ಲಿ ಬೆಂಗಳೂರಿನ ಸ್ಯಾಟ್‍ಲೈಟ್ ಬಸ್ ನಿಲ್ದಾಣದಿಂದ ರಾತ್ರಿ 11.33ಕ್ಕೆ ವೀರಾಜಪೇಟೆ ಮೂಲಕ ಮೂರ್ನಾಡಿಗೆ ಬಂದಿದ್ದಾರೆ. ಆದ್ದರಿಂದ ವಿಮಾನ ಮತ್ತು ಬಸ್‍ನಲ್ಲಿ ಪ್ರಯಾಣಿಸಿದ ಎಲ್ಲಾ ಪ್ರಯಾಣಿಕರು ತುರ್ತಾಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News