×
Ad

ಮಹಾದಾಯಿ ಯೋಜನೆ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲು ಸಿದ್ದರಾಮಯ್ಯ ಆಗ್ರಹ

Update: 2020-03-19 22:35 IST

ಬೆಂಗಳೂರು, ಮಾ.19: ಮಹಾದಾಯಿ ಯೋಜನೆಗೆ ರಾಜ್ಯ ಸರಕಾರ 500 ಕೋಟಿ ರೂ.ಅನುದಾನ ಮೀಸಲಿಟ್ಟಿರುವುದು ಸಂತಸದ ವಿಚಾರ. ಈ ಯೋಜನೆಯನ್ನು ಮುಂದಿನ 2 ವರ್ಷಗಳಲ್ಲಿ ಪೂರ್ಣಗೊಳಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರಕಾರವು ಈಗಾಗಲೆ ಈ ಯೋಜನೆ ಕುರಿತು ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ಆದುದರಿಂದ, ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ನಮ್ಮ ಸರಕಾರ 51 ಸಾವಿರ ಕೋಟಿ ರೂ.ವೆಚ್ಚದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿತ್ತು, ಅದನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು ಕಡಿಮೆ ಮಾಡುವ ಪ್ರಸ್ತಾವನೆ ಸರಕಾರದ ಮುಂದಿದೆ. ಒಂದು ವೇಳೆ ಅಕ್ಕಿ ಪ್ರಮಾಣವನ್ನು 2 ಕೆ.ಜಿ ಕಡಿತಗೊಳಿಸುವುದಾದರೆ ಅಷ್ಟೇ ಪ್ರಮಾಣದ ಜೋಳ ಅಥವಾ ರಾಗಿಯನ್ನು ಫಲಾನುಭವಿಗಳಿಗೆ ವಿತರಣೆ ಮಾಡಬೇಕು. ಬಡವರ ಅನ್ನ ಕಸಿಯುವಂತಹ ಕೆಲಸಕ್ಕೆ ಸರಕಾರ ಕೈ ಹಾಕಬಾರದು ಎಂದು ಅವರು ಹೇಳಿದರು.

ನಮ್ಮ ಸರಕಾರವು ಎಲ್ಲ ಸರಕಾರಿ ಇಲಾಖೆಗಳ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 50 ಲಕ್ಷ ರೂ.ವರೆಗೆ ಗುತ್ತಿಗೆಯಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿತ್ತು. ಅದರ ಮಿತಿಯನ್ನು ಈಗ ಕನಿಷ್ಠ 1 ಕೋಟಿ ರೂ.ಗಳಿಗೆ ಏರಿಕೆ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಕೃಷಿಭಾಗ್ಯ ಯೋಜನೆಯನ್ನು ಸರಕಾರ ಕೈಬಿಟ್ಟಿರುವುದು ಸರಿಯಲ್ಲ. ಬರಗಾಲ ಪೀಡಿತ ಪ್ರದೇಶಗಳಲ್ಲಿ ಅಂತರ್ಜಲ ಏರಿಕೆಗೆ ಕೃಷಿ ಹೊಂಡಗಳ ಅಗತ್ಯವಿದೆ. ಮಳೆಗಾಲದಲ್ಲಿ ನೀರನ್ನು ಶೇಖರಿಸಿಕೊಟ್ಟುಕೊಂಡು, ಉಳಿದ ಅವಧಿಯಲ್ಲಿ ಆ ನೀರನ್ನು ರೈತರು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು.

ಕಾರ್ಮಿಕ ವರ್ಗದವರು, ಬಡವರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಇದೀಗ, ಸರಕಾರ ಇಂದಿರಾ ಕ್ಯಾಂಟೀನ್ ಯೋಜನೆಗಳಿಗೆ ಅನುದಾನ ಬಿಡಗಡೆ ಮಾಡದೆ ಇರುವುದರಿಂದ, ಸ್ಥಳೀಯ ಸಂಸ್ಥೆಗಳು ಆಹಾರದ ದರವನ್ನು ಹೆಚ್ಚಳ ಮಾಡಲು ಮುಂದಾಗಿವೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಕೊಡಬಾರದು ಎಂದು ಸಿದ್ದರಾಮಯ್ಯ ಹೇಳಿದರು.

ರೈತರ ಸಾಲಮನ್ನಾಗೆ ಸಂಬಂಧಿಸಿದಂತೆ ಸಹಕಾರಿ ಬ್ಯಾಂಕುಗಳ 1.60 ಲಕ್ಷ ಅರ್ಜಿಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ 35 ಸಾವಿರ ಅರ್ಜಿಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಅತೀ ಶೀಘ್ರದಲ್ಲಿ ಇವುಗಳನ್ನು ಇತ್ಯರ್ಥಗೊಳಿಸಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರೆಯುವಂತೆ ಸರಕಾರ ಕ್ರಮವಹಿಸಬೇಕು ಎಂದು ಅವರು ಒತ್ತಾಯಿಸಿದರು. ಮೇಕೆದಾಟು ಯೋಜನೆಯನ್ನು 6 ಸಾವಿರ ಕೋಟಿ ರೂ.ಅಂದಾಜು ವೆಚ್ಚದಲ್ಲಿ ಕೈಗೊಂಡು ಪರ್ಯಾಯ ಅಣೆಕಟ್ಟು ನಿರ್ಮಿಸಲು ಉದ್ದೇಶಿಸಲಾಗಿತ್ತು. ಇದೀಗ, ತಮಿಳುನಾಡು ಅದಕ್ಕೆ ಕೊಕ್ಕೆ ಹಾಕುತ್ತಿದೆ. ನ್ಯಾಯಾಧೀಕರಣದ ಆದೇಶದ ಪರಿಧಿಯಲ್ಲೆ ಈ ಯೋಜನೆ ರೂಪಿಸಲಾಗಿದೆ. ಅದನ್ನು ಜಾರಿಗೆ ತರಲು ಮುಂದಾಗಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಬಾದಾಮಿ ಕ್ಷೇತ್ರದಲ್ಲಿ 525 ಕೋಟಿ ರೂ.ಯೋಜನೆಯ ಪ್ರಸ್ತಾಪ ಇತ್ತು. ಅದನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ. ವಲಯವಾರು ಬಜೆಟ್ ಮಂಡನೆಯಿಂದಾಗಿ ಯಾವ ಇಲಾಖೆಗಳಿಗೆ, ಯಾವ ಯೋಜನೆಗಳಿಗೆ ಎಷ್ಟು ಅನುದಾನ ನೀಡಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ಈ ಬಜೆಟ್ ಪಾರದರ್ಶಕತೆಯಿಂದ ಕೂಡಿಲ್ಲ. ಎಲ್ಲವೂ ಗೌಪ್ಯವಾಗಿದೆ ಎಂದು ಅವರು ಹೇಳಿದರು.

ಇದೊಂದು ನಿರಾಶಾದಾಯಕವಾದ ಬಜೆಟ್, ಯಾವುದೇ ವರ್ಗದ ಜನರಿಗೆ ನ್ಯಾಯ ಕೊಟ್ಟಿಲ್ಲ. ಇದು ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್ ಆಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News