ಕಲಬುರಗಿ: ಎಲ್ಲಾ ಸರಕಾರಿ ಕಚೇರಿಗಳ ಸೇವೆ ಸ್ಥಗಿತಗೊಳಿಸಲು ಜಿಲ್ಲಾಧಿಕಾರಿ ಆದೇಶ
Update: 2020-03-19 23:02 IST
ಕಲಬುರಗಿ, ಮಾ.19: ಕೊರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಸಾರ್ವಜನಿಕ ವಹಿವಾಟು ಇರುವ ಕಲಬುರಗಿ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಶರತ್. ಬಿ ಅವರು ಆದೇಶಿಸಿದ್ದಾರೆ.
ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯಗಳನ್ನು ನೀಡುವ ಅಂದರೆ, ಸಾರಿಗೆ ಇಲಾಖೆ, ನೋಂದಣಿ ಇಲಾಖೆ, ತಾಲೂಕು ನಾಡಾ ಕಚೇರಿ, ಆಧಾರ ಕೇಂದ್ರಗಳು ಮುಂತಾದ ಹಲವು ಕಾರ್ಯಾಲಯಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇರುವುದರಿಂದ ಇಂತಹ ಸ್ಥಳಗಳಲ್ಲಿ ಕೋವಿಡ್-19 (ನೋವೆಲ್ ಕೊರೋನ ವೈರಾಣು) ಹರಡುವ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸೇವೆಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.