ಪ್ರಧಾನಿಯ ‘ಜನತಾ ಕರ್ಫ್ಯೂ’ ಕರೆ ಬಗ್ಗೆ ಪ್ರತಿಕ್ರಿಯಿಸಿದ ಎಚ್.ಡಿ.ದೇವೇಗೌಡ

Update: 2020-03-20 11:32 GMT

ಬೆಂಗಳೂರು, ಮಾ.20: ಕಳೆದ ಡಿಸೆಂಬರ್‌ನಿಂದ ಇಡೀ ಜಗತ್ತನ್ನೆ ನಡುಗಿಸುತ್ತಿರುವ ಮಹಾಮಾರಿ ಕೊರೋನ ವೈರಸ್‌ಗೆ ಸದ್ಯ ಯಾವುದೆ ಮದ್ದು ಕಂಡು ಹಿಡಿಯಲ್ಪಟ್ಟಿಲ್ಲ. ಈ ಸಾಂಕ್ರಾಮಿಕ ವೈರಸ್ ಹಬ್ಬುತ್ತಿರುವ ಪರಿ ಯಾರಿಗಾದರೂ ಆತಂಕವುಂಟು ಮಾಡುವಂತಹದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ. 

ಪ್ರಧಾನಿ ನಿನ್ನೆ ರಾತ್ರಿ ದೇಶದ ಜನತೆಯನ್ನು ಉದ್ದೇಶಿಸಿ ಮಾಡಿದ ಭಾಷಣ ಮತ್ತು ಕೊಟ್ಟ ಕರೆ ಅತ್ಯಂತ ಸಮಯೋಚಿತ ಮತ್ತು ಆಚರಣೆ ಯೋಗ್ಯವಾಗಿದೆ. ಈ ಮಹಾಮಾರಿಗೆ ಮಂತ್ರ ಮತ್ತು ಮದ್ದು ಇಲ್ಲದಾಗ ಅದನ್ನು ಪ್ರತಿಯೊಬ್ಬ ಪ್ರಜೆಯೂ ಸ್ವಯಂ ಸಂಕಲ್ಪ ಮತ್ತು ಸಂಯಮದಿಂದಲೆ ಎದುರಿಸಬೇಕು ಎಂದು ಅವರು ತಿಳಿಸಿದ್ದಾರೆ.

ನಮ್ಮ ಸಾಮಾಜಿಕ ಕರ್ತವ್ಯದ ದೃಷ್ಟಿಯಿಂದ ಇದೇ ಮಾ.22ರಂದು ಇಡೀ ದೇಶದ ಸಮಸ್ತ ಜನತೆ ತಮಗೆ ತಾವೇ ಕರ್ಫ್ಯೂ ವಿಧಿಸಿಕೊಂಡು ಮನೆಯಲ್ಲೆ ಉಳಿದುಕೊಂಡು ಜನತಾ ಕರ್ಫ್ಯೂವನ್ನು ಯಶಸ್ವಿಗೊಳಿಸಬೇಕೆಂದು ಪ್ರಧಾನಿ ನೀಡಿರುವ ಕರೆಯನ್ನು ನಾವೆಲ್ಲರೂ ಪಾಲಿಸಲೇಬೇಕು ಎಂದು ಅವರು ತಿಳಿಸಿದ್ದಾರೆ.

65 ವರ್ಷ ಮೇಲ್ಪಟ್ಟ ವೃದ್ಧರು ಮತ್ತು 10 ವರ್ಷಗಳೊಳಗಿನ ಮಕ್ಕಳು ಕಡ್ಡಾಯವಾಗಿ ಮನೆಯಿಂದ ಹೊರಬಾರದೆಂಬ ಪ್ರಧಾನಿಯ ಆಗ್ರಹಪೂರ್ವಕ ವಿನಂತಿಯ ಹಿಂದಿರುವ ಕಾಳಜಿಯನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಈ ಅಗೋಚರ ಶತ್ರುವಿನ ವಿರುದ್ಧದ ಹೋರಾಟ ಇಡೀ ಜನತೆಯ ಸಮಷ್ಟಿಪ್ರಜ್ಞೆ ಮತ್ತು ಸಂಯಮಪೂರ್ಣ ಪಾಲ್ಗೊಳ್ಳುವಿಕೆಯಿಂದ ಮಾತ್ರ ಯಾಶಸ್ವಿಯಾಗಬಲ್ಲದು ಎಂದು ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ವೈದ್ಯರು, ಶುಶ್ರೂಶಕರು, ಪ್ಯಾರಾಮೆಡಿಕಲ್ ಸಿಬ್ಬಂದಿ, ಅಗತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರಲೇ ಬೇಕಾದ ಸಿಬ್ಬಂದಿ, ಕಾರ್ಮಿಕರ ಅನುಪಮ ಸೇವೆಗೆ ದೇಶದ ಜನತೆ ಮಾ.22ರಂದು ಸಂಜೆ 5 ಗಂಟೆಗೆ 5 ನಿಮಿಷಗಳ ಕಾಲ ತಾವಿರುವ ತಾಣದಿಂದಲೆ ಧನ್ಯವಾದಗಳನ್ನು ಸಲ್ಲಿಸಬೇಕೆಂದು ಪ್ರಧಾನಿ ಕೊಟ್ಟಿರುವ ಕರೆಯೂ ಸ್ವಾಗತಾರ್ಹವಾದುದು ಎಂದು ಅವರು ಹೇಳಿದ್ದಾರೆ. ನಮ್ಮ ರಾಜ್ಯವೂ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಪ್ರಧಾನಿ ಕರೆಯ ಹಿಂದಿರುವ ಕಾಳಜಿ ಮತ್ತು ಬದ್ಧತೆಯನ್ನು ಅರ್ಥ ಮಾಡಿಕೊಂಡು ಜನತೆ ಅದನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಓರ್ವ ಹಿರಿಯ ನಾಗರಿಕನಾಗಿ ಮತ್ತು ನನ್ನ ಅನುಭವದ ಇತಿಮಿತಿಯಲ್ಲಿ ಕಂಡುಕೊಂಡಿರುವ ಆಡಳಿತಾನುಭವದಲ್ಲಿ ರಾಜ್ಯದ ಜನರಿಗೆ ಮನವಿ ಮಾಡುತ್ತೇನೆ ಎಂದು ದೇವೇಗೌಡ ತಿಳಿಸಿದ್ದಾರೆ.

ಪ್ರಧಾನಿ ಕರೆಯನ್ನು ಯಾವುದೆ ರಾಜಕೀಯ ಸೋಂಕು ಅಥವಾ ಲೇಪ ಹಚ್ಚದೆ ನಾವೆಲ್ಲರೂ ಸ್ವಾಗತಿಸಬೇಕು ಮತ್ತು ಪಾಲಿಸಬೇಕು. ಅದರ ಜೊತೆಗೆ ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ನಿಟ್ಟಿನಲ್ಲಿ ತೆಗೆದುಕೊಳ್ಳಬಹುದಾದ ಸಾರ್ವಜನಿಕ ಹಿತಾಸಕ್ತಿಯ ಮತ್ತು ನಮ್ಮೆಲ್ಲರ ಸ್ವಾಸ್ಥ ಕಾಪಾಡುವ ಉಪಕ್ರಮಗಳಿಗೆ ನಾವೆಲ್ಲರೂ ವೈಯಕ್ತಿಕವಾಗಿ ಬದ್ಧರಾಗಿರಬೇಕೆಂದು ಅವರು ಮನವಿ ಮಾಡಿದ್ದಾರೆ.

ವೈಯಕ್ತಿಕ ಜವಾಬ್ದಾರಿ ಮತ್ತು ಸಂಘಟಿತ ಬದ್ಧತೆಯಿಂದ ಮಾತ್ರ ಈ ಪಿಡುಗಿನ ಪರಿಣಾಮಗಳನ್ನು ತಡೆಗಟ್ಟ ಬಹುದಾಗಿರುವ ಈ ವಿಶೇಷ ಸಂದರ್ಭದಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಳ್ಳುವುದು ಮತ್ತು ಆರೋಗ್ಯ ಇಲಾಖೆಯು ಸೂಚಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದ ಅನಿವಾರ್ಯವಾಗಿದೆ ಎಂದು ದೇವೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News