ಬಜೆಟ್ ನಲ್ಲಿ ಪ್ರವಾಸೋದ್ಯಮಕ್ಕೆ ನೀಡಿರುವ ಅನುದಾನ ಸಾಕಾಗುವುದಿಲ್ಲ: ಸಿ.ಟಿ.ರವಿ

Update: 2020-03-20 12:29 GMT

ಬೆಂಗಳೂರು, ಮಾ.20: ಈ ಸಲದ ಆಯವ್ಯಯದಲ್ಲಿ ಪ್ರವಾಸೋದ್ಯಮ ಇಲಾಖೆಗೆ 500 ಕೋಟಿ ರೂ.ಅನುದಾನ ನೀಡಿದ್ದು, ಇದು ಸಾಕಾಗುವುದಿಲ್ಲವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಮಾಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಭೋಜೇಗೌಡ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 20 ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ 500 ಕೋಟಿ ರೂ.ಅನುದಾನ ಸಾಕಾಗುವುದಿಲ್ಲ. ಹೀಗಾಗಿ ಅನುದಾನ ಹೆಚ್ಚಳಕ್ಕೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದ್ದು, ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆಂದು ತಿಳಿಸಿದರು.

ಚಿಕ್ಕಮಗಳೂರಿನ ಮುಳ್ಳಯನಗಿರಿ ಬೆಟ್ಟ ಸೇರಿದಂತೆ ಇಲ್ಲಿನ ಸುತ್ತಮುತ್ತಲ ಪ್ರದೇಶ ಹಾಗೂ ಅಲ್ಲಿನ ವಾತಾವರಣ ಸ್ವಿಝರ್‌ಲ್ಯಾಂಡ್‌ಗಿಂತ ಹೆಚ್ಚು ಸೌಂದರ್ಯದಿಂದ ಕೂಡಿದೆಯೆಂದು ಪ್ರವಾಸಿಗರೇ ಹೇಳುತ್ತಾರೆ. ಇದರ ಜೊತೆಗೆ ಹಳೇಬೀಡು ಸೇರಿ ಹೊಯ್ಸಳನ ಕಾಲದ ದೇವಾಲಯಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇವುಗಳನ್ನು ಮತ್ತಷ್ಟು ಜನಾಕರ್ಷಣೀಯಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರವಾಸಿ ತಾಣಗಳಿಗೆ ಮುಖ್ಯವಾಗಿ ರಸ್ತೆ ಸಂಪರ್ಕ ಚೆನ್ನಾಗಿರಬೇಕು. ಈ ನಿಟ್ಟಿನಲ್ಲಿ ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಎಲ್ಲ ಪ್ರವಾಸಿ ತಾಣಗಳಿಗೆ ಉತ್ತಮ ಸಂಪರ್ಕ ರಸ್ತೆಗಳನ್ನು ಕಲ್ಪಿಸಲು ಕಾರ್ಯಯೋಜನೆ ರೂಪಿಸಲಾಗುತ್ತಿದೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News