×
Ad

ಶೀಘ್ರ ಪಶು ವೈದ್ಯರ ನೇಮಕಾತಿ: ಸಚಿವ ಪ್ರಭು ಚೌಹಾಣ್

Update: 2020-03-20 18:24 IST

ಬೆಂಗಳೂರು, ಮಾ. 20: ಪಶುವೈದ್ಯಕೀಯ ಇಲಾಖೆಗೆ ಸದ್ಯಕ್ಕೆ 638 ವೈದ್ಯ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಹಂತ, ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ತಿಳಿಸಿದರು.

ಶುಕ್ರವಾರ ವಿಧಾನಪರಿಷತ್‌ನಲ್ಲಿ ಜೆಡಿಎಸ್ ಕೆ.ಟಿ.ಶ್ರೀಕಂಠೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶೀಘ್ರವಾಗಿ 638 ವೈದ್ಯ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳಿಸಿಕೊಟ್ಟಿದ್ದೇನೆ. ಅಲ್ಲಿಂದ ಅನುಮತಿ ಸಿಕ್ಕಕೂಡಲೇ ಭರ್ತಿ ಮಾಡಿಕೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ 26 ಪಾಲಿಕ್ಲಿನಿಕ್, 664 ಪಶು ಆಸ್ಪತ್ರೆಗಳು, 2,135 ಪಶು ಚಿಕಿತ್ಸಾಲಯ, 1206 ಪಶು ಪ್ರಾಥಮಿಕ ಚಿಕಿತ್ಸಾ ಕೇಂದ್ರ, 176 ಸಂಚಾರಿ ಪಶು ಚಿಕಿತ್ಸಾಲಯ ಸೇರಿದಂತೆ ಒಟ್ಟು 4,212 ಪಶು ವೈದ್ಯಕೀಯ ಸಂಸ್ಥೆಗಳ ಕಾರ್ಯನಿರ್ವಹಣೆ ಮಾಡುತ್ತಿವೆ. ಇವೆಲ್ಲವಕ್ಕೂ ಅಗತ್ಯ ವೈದ್ಯರು ಹಾಗೂ ಡಿ ದರ್ಜೆ ನೌಕರರನ್ನು ಭರ್ತಿ ಮಾಡಲಾಗುವುದು ಎಂದು ಅವರು ಹೇಳಿದರು.

ತೆಲಂಗಾಣದಲ್ಲಿ ಹಸು, ಕುರಿ, ಎಮ್ಮೆ ಸೇರಿದಂತೆ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ನೀಡುವುದಕ್ಕಾಗಿಯೇ 100ಪಶು ಅಂಬುಲೆನ್ಸ್‌ಗಳನ್ನು ಪ್ರಾರಂಭಿಸಲಾಗಿದೆ. ನಮ್ಮಲ್ಲೂ ಪ್ರಾರಂಭಿಸಬೇಕೆಂದು ಕಾಂಗ್ರೆಸ್‌ನ ಎಚ್.ಎಂ.ರೇವಣ್ಣ ಮನವಿ ಮಾಡಿದರು. ಈ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಸಚಿವರು ಆಶ್ವಾಸನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News